ನೇಪಾಳದ ಆಟಗಾರ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿದ್ದು, ಒಟ್ಟು ಐವರು ಆಟಗಾರರು ಈ ದಾಖಲೆ ಬರೆದಂತಾಗಿದೆ. ಮೊಟ್ಟ ಮೊದಲ ಬಾರಿಗೆ ಈ ಸಾಧನೆಯನ್ನು ದಕ್ಷಿಣ ಆಫ್ರಿಕಾ ಆಟಗಾರ ಹರ್ಷಲ್ ಗಿಬ್ಸ್ ಬರೆದಿದ್ದಾರೆ. ನಂತರ ನಾಲ್ವರು ಆಟಗಾರರು ಈ ಸಾಧನೆ ಮಾಡಿದ್ದಾರೆ.
ಮಾರ್ಚ್ 16, 2007 ರಲ್ಲಿ ನೆದರ್ಲೆಂಡ್ಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಡಾನ್ ವ್ಯಾನ್ ಬಂಗೆ ಓವರ್ ನಲ್ಲಿ ಹರ್ಷಲ್ ಗಿಬ್ಸ್ ಒಂದೇ ಓವರ್ ನಲ್ಲಿ 6 ಸಿಕ್ಸ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ನಂತರ ಸೆಪ್ಟೆಂಬರ್ 19, 2007 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ ಭಾರತದ ಯುವರಾಜ್ ಸಿಂಗ್ ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ್ದರು.
2021 ರಲ್ಲಿ ಶ್ರೀಲಂಕಾ ಸ್ಪಿನ್ನರ್ ಅಕಿಲ ಧನಂಜಯ್ ಓವರ್ ನಲ್ಲಿ ವೆಸ್ಟ್ ಇಂಡೀಸ್ ಆಟಗಾರ ಕೀರನ್ ಪೊಲಾರ್ಡ್ 6 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಯುವರಾಜ್ ಸಿಂಗ್ ನಂತರ ಟಿ20 ಕ್ರಿಕೆಟ್ ನಲ್ಲಿ 6 ಸಿಕ್ಸರ್ ಸಿಡಿಸಿದ್ದ 2ನೇ ಆಟಗಾರ ಆಗಿದ್ದಾರೆ.
2021 ರಲ್ಲಿ ಪಪುವಾ ನ್ಯೂ ಗಿನಿಯಾ ತಂಡದ ಬೌಲರ್ ಗೌಡಿ ಟೋಕಾರ ಓವರ್ ನಲ್ಲಿ ಯುಎಸ್ಎ ಬ್ಯಾಟರ್ ಜಸ್ಕರನ್ ಮಲ್ಹೋತ್ರಾ 6 ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಏಕದಿನದಲ್ಲಿ ಗಿಬ್ಸ್ ನಂತರ ಈ ಸಾಧನೆ ಮಾಡಿದ 2ನೇ ಬ್ಯಾಟರ್ ಆಗಿದ್ದಾರೆ. 2024 ರಲ್ಲಿ ಖತಾರ್ ವಿರುದ್ಧದ ಟಿ20 ಪಂದ್ಯದಲ್ಲಿ ಕ್ರಮಾನ್ ಖಾನ್ ಓವರ್ ನಲ್ಲಿ ನೇಪಾಳ ಆಟಗಾರ ದೀಪೇಂದ್ರ ಸಿಂಗ್ ಐರಿ 6 ಸಿಕ್ಸರ್ ಸಿಡಿಸಿ 3ನೇ ಆಟಗಾರ ಎಂಬ ಸಾಧನೆ ಮೆರೆದಿದ್ದಾರೆ.