ತುಮಕೂರು: ಕ್ರಿಮಿನಲ್ ಗಳಿಗೆ ಪೊಲೀಸ್ ಇಲಾಖೆಯ (Police Department) ಮಾಹಿತಿ ನೀಡುತ್ತಿದ್ದ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ತುಮಕೂರು (Tumakuru) ಎಸ್ಪಿ ಕೆ.ವಿ ಅಶೋಕ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕ್ಯಾತಸಂದ್ರ ಠಾಣೆಯ ಮಂಜು, ಅಹೋಬಲ ನರಸಿಂಹಮೂರ್ತಿ, ಜಯನಗರ ಠಾಣೆ ಮನು ಎಸ್.ಗೌಡ, ಸಂಚಾರ ಪೊಲೀಸ್ ಠಾಣೆ ರಾಮಕೃಷ್ಣ ಹಾಗೂ ಎಸ್ಪಿ ಕಚೇರಿಯ ಸುರೇಶ್ ಅಮಾನತುಗೊಂಡಿರುವ ಪೊಲೀಸರು.
ಕ್ರಿಮಿನಲ್ಗಳಾದ ಮಂಜುನಾಥ್ ರೆಡ್ಡಿ, ನವೀನ್, ನರಸಿಂಹಮೂರ್ತಿ ಎಂಬುವವರಿಗೆ ಮಾಹಿತಿ ನೀಡುತ್ತಿದ್ದರು ಎನ್ನಲಾಗಿದೆ. ಈ ಮೂವರು ಆರೋಪಿಗಳ ವಿರುದ್ಧ ದಂಡಿನಶಿವರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಚು, ಹಲ್ಲೆ ಆರೋಪದ ಪ್ರಕರಣ ದಾಖಲಾಗಿತ್ತು. ವಾಟ್ಸಪ್ ಮೂಲಕ ಪೊಲೀಸರೇ ಆರೋಪಿಗಳಿಗೆ ಮಾಹಿತಿ ನೀಡಿದ್ದರು. ಮಂಜುನಾಥ್ ರೆಡ್ಡಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.