1. ಮಂಡಕ್ಕಿ ದೋಸೆ ಮತ್ತು ಈರುಳ್ಳಿ ಚಟ್ನಿ
ಮಂಡಕ್ಕಿ ದೋಸೆಗೆ ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ – 2 ಕಪ್
ಮಂಡಕ್ಕಿ – 2 1/2 ಕಪ್
ಮೊಸರು – 2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಈರುಳ್ಳಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
ಈರುಳ್ಳಿಗಳು – 5
ತೆಂಗಿನಕಾಯಿ ತುರಿ – 1ಕಪ್
ಬೇಳೆ – 1 ಮುಷ್ಟಿ
ಕೆಂಪು ಮೆಣಸು – 10
ಬ್ಯಾಡಗಿ ಮೆಣಸು – 5
ಹುಣಸೆಹಣ್ಣಿನ ತಿರುಳು – 1 ಚಮಚ
ಬೆಲ್ಲ – ಸಣ್ಣ ತುಂಡು
ರುಚಿಗೆ ತಕ್ಕಷ್ಟು ಉಪ್ಪು
ದೋಸೆ ಮಾಡುವ ವಿಧಾನ
ಮೊದಲನೆಯದಾಗಿ ಅಕ್ಕಿಯನ್ನು ಮೊಸರಿನಲ್ಲಿ ಮತ್ತು ಮಂಡಕ್ಕಿಯನ್ನು ನೀರಿನಲ್ಲಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ನಂತರ ಮಿಕ್ಸಿ ಜಾರಿಗೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ರುಬ್ಬಿದ ಹಿಟ್ಟನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿ ರಾತ್ರಿಯಿಡೀ ಹುದುಗಲು ಹಾಗೆ ಬಿಡಿ.
ಬೆಳಿಗ್ಗೆ ಹಿಟ್ಟಿಗೆ ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿ. ನಂತರ ತವಾ ಬಿಸಿ ಮಾಡಿ ದೋಸೆ ಹುಯ್ಯಿರಿ.
ಈರುಳ್ಳಿ ಚಟ್ನಿ ಮಾಡುವ ವಿಧಾನ
ಮೊದಲಿಗೆ ಪಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಬೇಳೆ, ಕೆಂಪು ಮೆಣಸು, ಬ್ಯಾಡಗಿ ಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಮಿಕ್ಸಿ ಜಾರಿಗೆ ಇದನ್ನು ಸೇರಿಸಿ ತೆಂಗಿನಕಾಯಿ, ಉಪ್ಪು, ಬೆಲ್ಲ, ಹುಣಸೆಹಣ್ಣು ಸೇರಿಸಿ. ಚೆನ್ನಾಗಿ ರುಬ್ಬಿ.
ಬಳಿಕ ಚಟ್ನಿಗೆ ಸಾಸಿವೆ ಒಗ್ಗರಣೆ ಕೊಡಿ.
ನಂತರ ಚಟ್ನಿಯೊಂದಿಗೆ ಬಿಸಿ ಬಿಸಿಯಾದ ದೋಸೆಯನ್ನು ಸವಿಯಿರಿ.
2. ಅಕ್ಕಿಯ ಕೊಡುಬಾಲೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು 1 ಕಪ್
ನೀರು 2 ಕಪ್
ತೆಂಗಿನ ಎಣ್ಣೆ 2 ಟೀ ಚಮಚ
ಜೀರಿಗೆ 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ
ಮಾಡುವ ವಿಧಾನ
ಮೊದಲಿಗೆ ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ನೀರು, ಉಪ್ಪು, ತಾಜಾ ತೆಂಗಿನ ಎಣ್ಣೆ ಸೇರಿಸಿ. ಕುದಿಸಿ. ನಂತರ ಅಕ್ಕಿ ಹಿಟ್ಟು ಜೀರಾ ಸೇರಿಸಿ ಚೆನ್ನಾಗಿ ಬೆರೆಸಿ. 20 ನಿಮಿಷ ಬೇಯಿಸಿ.. ನಂತರ ಚೆನ್ನಾಗಿ ನಾದಿ ಹಿಟ್ಟನ್ನು ತಯಾರಿಸಿಕೊಳ್ಳಿ. ಚೆನ್ನಾಗಿ ಕಲಸಿ. ತಣ್ಣಗಾಗಲು ಬಿಡಿ. ನಂತರ ಆ ಹಿಟ್ಟಿನಿಂದ ಕೊಡುಬಾಲೆಗಳನ್ನು ತಯಾರಿಸಿ ಕೊಳ್ಳಿ. ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ರುಚಿಯಾದ ಅಕ್ಕಿಯ ಕೊಡುಬಾಲೆ ಸವಿಯಲು ಸಿದ್ಧವಾಗಿದೆ.
4. ಹಾಗಲಕಾಯಿ ಕಾಯಿರಸ
ಬೇಕಾಗುವ ಸಾಮಗ್ರಿಗಳು
ಹಾಗಲಕಾಯಿ – 4
ಕಡಲೆ ಬೇಳೆ – 2 ಚಮಚ
ಉದ್ದಿನಬೇಳೆ – 1 ಚಮಚ
ಕಪ್ಪು ಎಳ್ಳು – 2 ಚಮಚ
ಕಾಯಿತುರಿ/ಒಣಕೊಬ್ಬರಿ – 4 ಚಮಚ
ಮೆಂತೆ – 1/4 ಚಮಚ
ಒಣಮೆಣಸಿನಕಾಯಿ – 5
ಹುಣಸೆ ರಸ – 1 ಕಪ್
ಬೆಲ್ಲ – 1/2 ಕಪ್
ಒಗ್ಗರಣೆಗೆ
ಸಾಸಿವೆ – 1/2 ಚಮಚ
ಎಣ್ಣೆ – 1 ಚಮಚ
ಮಾಡುವ ವಿಧಾನ
ಮೊದಲಿಗೆ ಹಾಗಲಕಾಯಿಗಳನ್ನು ಚಿಕ್ಕದಾಗಿ ಹೆಚ್ಚಿ ತೊಳೆದು 1/2 ಚಮಚ ಅರಿಶಿನ, 1 ಚಮಚ ಕಲ್ಲು ಉಪ್ಪು ಬೆರೆಸಿ 30 ನಿಮಿಷಗಳ ಕಾಲ ನೆನೆಸಿಡಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಕಡಲೆ ಬೇಳೆ, ಉದ್ದಿನಬೇಳೆ, ಕಪ್ಪು ಎಳ್ಳು, ಕಾಯಿತುರಿ/ಒಣಕೊಬ್ಬರಿ, ಮೆಂತೆ ಮತ್ತು ಒಣಮೆಣಸಿನಕಾಯಿಗಳನ್ನು ಹುರಿದು, ತಣ್ಣಗಾದ ಬಳಿಕ ರುಬ್ಬಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಹಾಗಲಕಾಯಿ ಸೇರಿಸಿ ಹುರಿಯಬೇಕು. ನಂತರ ಇದಕ್ಕೆ ಹುಣಸೆ ರಸ, ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಒಂದು ಕುದಿ ಬರಿಸಿ. ನಂತರ ರುಬ್ಬಿದ ಮಸಾಲೆ ಸೇರಿಸಿ, ಅಗತ್ಯವಿರುವಷ್ಟು ನೀರು ಹಾಕಿ ಮತ್ತೊಮ್ಮೆ ಕುದಿಸಿದರೆ ಹಾಗಲಕಾಯಿ ಕಾಯಿರಸ ಸವಿಯಲು ರೆಡಿ.
5. ಫ್ರೆಂಚ್ ಪ್ರೈ
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ – 3
ಕಾರ್ನ್ ಫ್ಲೋರ್ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಾಟ್ ಮಸಾಲಾ – 1/2 ಚಮಚ
ಕೆಂಪು ಮೆಣಸಿನ ಪುಡಿ – 1/2 ಚಮಚ
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ತೆಳ್ಳಗೆ ಉದ್ದಕ್ಕೆ ಕತ್ತರಿಸಿ ಇಟ್ಟುಕೊಳ್ಳಿ. ನಂತರ 30 ನಿಮಿಷ ನೀರಿನಲ್ಲಿ ನೆನೆಯಲು ಬಿಡಿ.
ಬಳಿಕ ಅಗಲವಾದ ಪಾತ್ರೆಗೆ ಆಲೂಗಡ್ಡೆ ಚೂರು, ಕಾರ್ನ್ ಫ್ಲೋರ್, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿ ಮಾಡಿ ಆಲೂಗಡ್ಡೆ ಚೂರುಗಳನ್ನು ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಕರಿದ ಆಲೂಗಡ್ಡೆ ಚೂರುಗಳನ್ನು ಟಿಶ್ಯೂ ಪೇಪರ್ ಮೇಲೆ ಇಟ್ಟು 1 ನಿಮಿಷ ಬಿಟ್ಟು ನಂತರ ಅವುಗಳಿಗೆ ಚಾಟ್ ಮಸಾಲಾ ಮತ್ತು ಮೆಣಸಿನ ಪುಡಿ ಉದುರಿಸಿ ಮಿಶ್ರ ಮಾಡಿ . ಈಗ ಫ್ರೆಂಚ್ ಪ್ರೈ ಸವಿಯಲು ಸಿದ್ಧವಾಗಿದೆ.
4. ಹೆಸರು ಹಿಟ್ಟಿನ ಲಾಡು
ಬೇಕಾಗುವ ಪದಾರ್ಥಗಳು:
ಹೆಸರು ಹಿಟ್ಟು – 1/2 ಕೆಜಿ
ಬೆಲ್ಲ- 300 ಗ್ರಾಂ
ಒಣ ಕೊಬ್ಬರಿ ಪುಡಿ/ತುರಿ – 1ಕಪ್
ಗೋಡಂಬಿ ಬಾದಾಮಿ – 1 ಕಪ್
ಏಲಕ್ಕಿ ಪುಡಿ – 1/2
ತುಪ್ಪ – 4 ಚಮಚ
ಮೊದಲಿಗೆ ಹೆಸರುಬೇಳೆಯನ್ನು ಕಂದುಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಕೊಳ್ಳಿ. ಬಳಿಕ ಗೋಡಂಬಿ ಮತ್ತು ಬಾದಾಮಿಯನ್ನು ಪುಡಿ ಮಾಡಿಕೊಳ್ಳಿ. ಬೆಲ್ಲವನ್ನು ಕರಗಿಸಿ , ಸೋಸಿ, ಎಳೆ ಪಾಕ ಬರುವವರೆಗೆ ಕುದಿಸಿ.
ನಂತರ ಬಾಣಲೆ ಬಿಸಿ ಮಾಡಿ ಅರ್ಧದಷ್ಟು ಹೆಸರು ಹಿಟ್ಟು ಹಾಕಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದು ತೆಗೆಯಿರಿ. ಈಗ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ
ನಂತರ ಪುಡಿ ಮಾಡಿದ ಗೋಡಂಬಿ ಬಾದಾಮಿ ಪುಡಿ ಸೇರಿಸಿ ಹುರಿಯಿರಿ. ನಂತರ ಹುರಿದಿಟ್ಟ ಹೆಸರು ಹಿಟ್ಟು ಸೇರಿಸಿ. ಒಣ ಕೊಬ್ಬರಿ ಪುಡಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬೆಲ್ಲದ ಪಾಕವನ್ನು ಸೇರಿಸಿ.ಚೆನ್ನಾಗಿ ಬೆರೆಸಿ, ಬಿಸಿ ಇದ್ದಾಗಲೇ ಉಂಡೆಯನ್ನು ಕಟ್ಟಿ. ರುಚಿಯಾದ ಹೆಸರು ಹಿಟ್ಟಿನ ಲಾಡು ಸವಿಯಲು ಸಿದ್ಧವಾಗಿದೆ.