ಕನ್ನಡದ ಎದೆ ಮೇಲೆ ಕಾಲು | ಟ್ವಿಟರ್ ನಲ್ಲಿ ಕುಮಾರಸ್ವಾಮಿ ಆಕ್ರೋಶ Saaksha Tv
ಬೆಂಗಳೂರು: ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನೂ ಕೇಂದ್ರ ಸರಕಾರ ಮಾಡುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಇನ್ನೊಂದು ಸಾಕ್ಷಿ. ಈಗ ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ.ಕೆ ಸೂರ್ಯೋದಯಕ್ಕೆ ಮುನ್ನವೇ ಪ್ರಸಾರ ಆರಂಭಿಸಿ ರಾತ್ರಿ 11ರ ತನಕ ಸತತ 18 ಗಂಟೆ ಕಾಲ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಿರುವ ʼ101.3 ಎಫ್ ಎಂ ರೇನ್ ಬೋ ಕನ್ನಡ ಕಾಮನಬಿಲ್ಲುʼ ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರಕಾರ ಹೊರಟಿರುವುದು ಅಕ್ಷಮ್ಯ. ಕನ್ನಡಕ್ಕೆ ಕೊಡಲಿ ಪೆಟ್ಟು ಎಂದಿದ್ದಾರೆ.
ಈ ಹಿಂದೆ ಕನ್ನಡಿಗರ ಮನೆಮನದಲ್ಲಿ ತುಂಬಿದ್ದ ʼಅಮೃತವರ್ಷಿಣಿʼಯನ್ನು ಮುಗಿಸಲಾಯಿತು. ಈಗ ಕನ್ನಡ ಕಾಮನಬಿಲ್ಲನ್ನು ಮುಗಿಸಲು ಹೊರಟಿದ್ದಾರೆ. ಕನ್ನಡ ವಿರೋಧಿ ಕೇಂದ್ರ ಸರಕಾರ, ಕನ್ನಡದ್ರೋಹಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕನ್ನಡದ ಆಕ್ರಂದನವನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ʼರೇನ್ ಬೋ ಕನ್ನಡ ಕಾಮನಬಿಲ್ಲುʼ ಕೇವಲ ರೇಡಿಯೋ ವಾಹಿನಿ ಮಾತ್ರವಲ್ಲ, ಕನ್ನಡಿಗರ ಹೃದಯಬಡಿತ, ಕನ್ನಡದ ಅಸ್ಮಿತೆ ಕೂಡ. ಆದರೆ, ಕೇಂದ್ರ ಸರಕಾರ ಕನ್ನಡಿಗರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ. ಅಧಿಕಾರಿಗಳ ಮೂಲಕ ಕನ್ನಡಮ್ಮನ ರಕ್ತ ಬಗೆಯುವ ಹೀನ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಕನ್ನಡಿಗರು ಸಹಿಷ್ಣುಗಳು, ಸೌಮ್ಯರು ಹೌದು. ಹಾಗೆಂದು, ತಾಯಿಭಾಷೆಗೆ ಕೊಳ್ಳಿ ಇಡುತ್ತಿರುವ ʼಭಾಷಾಂತಕʼರನ್ನು ನೋಡುತ್ತಾ ಸುಮ್ಮನೆ ಕೂರಲಾರರು, ನೆನಪಿರಲಿ. ಸಂಸದರೆಲ್ಲರೂ ದನಿಯೆತ್ತಿ ಈ ರೇಡಿಯೋ ವಾಹಿನಿಯನ್ನು ಉಳಿಸಬೇಕು. ಮುಚ್ಚುವುದು ಅಥವಾ ಇನ್ನೊಂದರಲ್ಲಿ ವಿಲೀನ ಮಾಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹರಿಹಾಯ್ದಿದ್ದಾರೆ.