ನವದೆಹಲಿ: ಭಾರತವನ್ನು ಅಧಿಕ ವರ್ಷಗಳ ಕಾಲ ಆಳಿರುವ ಕಾಂಗ್ರೆಸ್ ಪಕ್ಷ ಇದೇ ಮೊದಲ ಬಾರಿಗೆ ಕಡಿಮೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದೆ.
ದೇಶವನ್ನು ಅತ್ಯಧಿಕ ಕಾಲ ಆಳಿದ್ದ ಕಾಂಗ್ರೆಸ್ ಈಗ ಮೋದಿ ಅಲೆಯಲ್ಲಿ ಕುಸಿದು ಹೋಗಿದೆ ಅನಿಸುತ್ತಿದೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ. ಕೇವಲ 326 ಲೋಕಸಭೆ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ. ಅಲ್ಲದೇ, ಕಾಂಗ್ರೆಸ್ ಇಲ್ಲಿಯವರೆಗೆ ಕೇವಲ 281 ಅಭ್ಯರ್ಥಿಗಳನ್ನಷ್ಟೇ ಪ್ರಕಟಿಸಿದೆ. ಹಲವು ರಾಜ್ಯಗಳಲ್ಲಿ ಮಿತ್ರ ಪಕ್ಷಗಳೊಂದಿಗೆ ಸ್ಥಾನ ಹಂಚಿಕೊಂಡಿದೆ.
ಉತ್ತರ ಪ್ರದೇಶದಲ್ಲಿ 80, ಮಹಾರಾಷ್ಟ್ರದಲ್ಲಿ 40, ಬಿಹಾರದಲ್ಲಿ 40, ತಮಿಳುನಾಡಿನಲ್ಲಿ 39 ಸ್ಥಾನಗಳು ಸೇರಿದಂತೆ ಒಟ್ಟು 207 ಸ್ಥಾನಗಳಿದ್ದರೂ ಕಾಂಗ್ರೆಸ್ ಕೇವಲ 50ರಲ್ಲಿ ಮಾತ್ರ ಸ್ಪರ್ಧಿಸಿದೆ. ಕರ್ನಾಟಕ, ತೆಲಂಗಾಣ, ಪಂಜಾಬ್, ಛತ್ತೀಸ್‌ಗಡ, ಉತ್ತರಾಖಂಡ್, ಹಿಮಾಚಲಪ್ರದೇಶ, ಗೋವಾ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷವು ಎಲ್ಲ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಕಾಂಗ್ರೆಸ್ 2009ರಲ್ಲಿ 440 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 206 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಆದರೆ, 2014ರಲ್ಲಿ 464 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 44 ಹಾಗೂ 2019ರಲ್ಲಿ 52 ಜನ ಜಯ ಗಳಿಸಿದ್ದರು. ಈ ಬಾರಿ ಕೂಡ ಮೋದಿ ಅಲೆಯ ವಿರುದ್ಧವೇ ಕಾಂಗ್ರೆಸ್ ಸ್ಪರ್ಧಿಸಿದ್ದು, ಏನಾಗಲಿದೆ ಕಾಯ್ದು ನೋಡಬೇಕಿದೆ.