ಡೊಮ್ಕಲ್: ಹೆಣ್ಣಾಗಲಿ, ಗಂಡಾಗಲಿ ಎಲ್ಲವೂ ಮಕ್ಕಳೇ. ಆದರೆ, ಹಲವರು ಇಂದಿಗೂ ಗಂಡು ಮಕ್ಕಳ ಬಗೆಗಿನ ಪ್ರೀತಿ ಇಟ್ಟುಕೊಂಡು ಹೆಣ್ಣು ಮಕ್ಕಳ ಶೋಷನೆ ಮಾಡುತ್ತಲೇ ಇರುತ್ತಾರೆ. ಇಲ್ಲೊಂದು ಕೆಟ್ಟ ಕುಟುಂಬ, ಕೇವಲ 4 ತಿಂಗಳ ಹೆಣ್ಣು ಮಗುವನ್ನೇ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್ನಲ್ಲಿ (Murshidabad) ನಾಲ್ಕು ತಿಂಗಳ ಮಗಳನ್ನು ಪೋಷಕರೇ ಕೊಂದಿದ್ದಾರೆ ಎನ್ನಲಾಗಿದೆ. ಮೂರನೆಯದ್ದೂ ಹೆಣ್ಣು ಮಗು ಆಗಿದ್ದರಿಂದಾಗಿ ನಾಲ್ಕು ತಿಂಗಳ ಮಗುವನ್ನು ಗೋಡೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖದೀಜಾ ಖಾತುನ್ ಹೀಗೆ ಸಾವನ್ನಪ್ಪಿದ ಮಗು. ರಿಂಟು ಮೊಂಡಲ್ ಹಾಗೂ ಬೆಲುರಾ ಬೀಬಿಗೆ ಈ ಹಿಂದೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ್ದರು. ಆದರೆ, ಮೂರನೇಯದ್ದು ಗಂಡಾಗಲಿ ಎಂದು ಭಾವಿಸಿದ್ದರು. ಇವರ ನಿರೀಕ್ಷೆ ಸುಳ್ಳಾಗಿತ್ತು. ಹೀಗಾಗಿ ಕೋಪದಲ್ಲಿ ಮಗುವನ್ನು ಗೋಡೆಗೆ ಎಸೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ರಕ್ತಸಿಕ್ತವಾಗಿ ಬಿದ್ದಿದ್ದ ಮಗುವನ್ನು ಕುಟುಂಬದ ಮತ್ತೊಬ್ಬ ಸದಸ್ಯರು ನೋಡಿ, ಬೇರೆಯವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೇರಳದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರಿಂಟು ಶೇಖ್ ವಾರದ ಹಿಂದೆ ಗ್ರಾಮಕ್ಕೆ ಬಂದಿದ್ದ. ಅಲ್ಲದೇ, ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಪತ್ನಿಯನ್ನು ನಿಂದಿಸಲು ಆರಂಭಿಸಿದ್ದ ಎನ್ನಲಾಗಿದೆ.