ರಾಂಚಿ: ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ಈಡೀ ದೇಶವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಸ್ಪೇನ್ ನ ವಿದೇಶಿ ಪ್ರವಾಸಿಗರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ವರದಿಯಾಗಿದೆ.
ಹನ್ಸ್ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್ ನಲ್ಲಿ ಈ ಘಟನೆ ನಡೆದಿದ್ದು, ಸ್ಪೇನ್ ದಂಪತಿ ತಾತ್ಕಾಲಿಕ ಟೆಂಟ್ ನಲ್ಲಿ ರಾತ್ರಿ ಕಳೆಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ದಂಪತಿ ಬಾಂಗ್ಲಾದೇಶದಿಂದ ದ್ವಿಚಕ್ರ ವಾಹನದಲ್ಲಿ ಆಗಮಿಸಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಸುಮಾರು ಏಳೆಂಟು ಜನರಿದ್ದ ಯುವಕರ ಗುಂಪು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಉಳಿದವರಿಗಾಗಿ ಬಲೆ ಬೀಸಲಾಗಿದೆ. ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರ ಇದರ ಕುರಿತು ಗಮನಹರಿಸಿ ಇಂತಹ ಅರಾಜಕತೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.