Forest fire : ಚಾಮುಂಡಿ ಬೆಟ್ಟ, ದಕ್ಷಿಣ ಕನ್ನಡ ಸೇರಿ ಹಲವಡೆ ಕಾಡ್ಗಿಚ್ಚು – ಅಪಾರ ಪ್ರಮಾಣದ ಅರಣ್ಯ ನಾಶ…
ಮೈಸೂರು ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಕುರುಚಲು ಗಿಡ ಪ್ರದೇಶಕ್ಕೆ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ದಳ ಯಶಸ್ವಿಯಾಗಿದೆ. ಬೆಟ್ಟದ ಮೇಲಿನ ಒಣ ಹುಲ್ಲಿಗೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಮುಂಡಿ ಬೆಟ್ಟದ ನಿವಾಸಿಗಳು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ಸುಮಾರು 10 ಎಕರೆ ಪ್ರದೇಶದ ವರೆಗೂ ಹರಡಿದೆ.
ಈ ನಡುವೆ ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿಯೂ ನಿನ್ನೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಗೌರಿಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ ಗ್ರಾಮದ ಉದ್ಯಾರ ಹಾಗೂ ಶಿಬಾಜೆ ಗ್ರಾಮದ ಪೆರ್ಲ ಎಂಬಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, 20ಕ್ಕೂ ಹೆಚ್ಚು ಅರಣ್ಯ ಇಲಾಖಾ ಸಿಬ್ಬಂದಿ ಬೆಂಕಿ ನಂದಿಸಿದರು. ಇದೇ ವೇಳೆ, ಕೊಡಗಿನ ನಾಪೋಕ್ಲು ಸಮೀಪದ ಕಕ್ಕಬ್ಬೆ – ನೆಲಜಿ ವ್ಯಾಪ್ತಿಯ ಇಗ್ಗುತಪ್ಪ ಬೆಟ್ಟದಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದು, ಮಲ್ಮಾ ಬೆಟ್ಟದಲ್ಲಿರುವ ದೇವನೆಲೆಯ ಸುತ್ತ ಕುರುಚಲು ಗಿಡಗಳು ಸಂಪೂರ್ಣ ಭಸ್ಮವಾಗಿ ಬರಡಾಗಿದೆ.
Forest fire : Many forest fires including Chamundi Hill, Dakshina Kannada – massive forest destruction…