ಮುಂಬಯಿ: ಇತ್ತೀಚೆಗೆ ಹಲವಾರು ಹಿರಿಯ ನಾಯಕರು ಕೂಡ ಕಾಂಗ್ರೆಸ್ ಬಗ್ಗೆ ಮುನಿಸಿಕೊಂಡು ಪಕ್ಷ ತೊರೆಯುತ್ತಿದ್ದಾರೆ. ಹಲವು ದಶಕಗಳವರೆಗೆ ಪಕ್ಷ ಪ್ರೀತಿಸುತ್ತಿದ್ದವರು ಬಿಟ್ಟು ಹೋಗುತ್ತಿರುವುದಕ್ಕೆ ಕಾರ್ಯಕರ್ತರಲ್ಲಿ ಆತಂಕ ಕೂಡ ವ್ಯಕ್ತವಾಗುತ್ತಿದ್ದು, ಈಗ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ (Baba Siddique) ಬರೋಬ್ಬರಿ 48 ವರ್ಷಗಳ ನಂತರ ದಿಢೀರ್ ಎಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಅವರು, ನಾನು ಯುವಕನಾಗಿದ್ದಾಗಲೇ ಕಾಂಗ್ರೆಸ್ ಸೇರಿದ್ದೆ. ಇದು 48 ವರ್ಷಗಳ ನನ್ನ ಮಹತ್ವದ ಪ್ರಯಾಣವಾಗಿದೆ. ಇಂದು ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಹೇಳಿಕೊಳ್ಳುವುದಕ್ಕೆ ಹೆಚ್ಚಿನ ಸಂಗತಿಗಳು ಇವೆ. ಆದರೆ, ಕೆಲವೊಂದು ವಿಷಯಗಳನ್ನು ಹೇಳದೆ ಬಿಡುವುದು ಉತ್ತಮ. ಹೀಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಸಿದ್ದಿಕ್ ಅವರು ಬಾಂದ್ರಾ (ವಂದ್ರೆ) ಪಶ್ಚಿಮ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ಅಲ್ಲದೇ, ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವರಾಗಿದ್ದರು ಮತ್ತು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಂಬೈ ವಿಭಾಗದ ಅಧ್ಯಕ್ಷರಾಗಿದ್ದರು. 014ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ವಿರುದ್ಧ ಬಾಬಾ ಸಿದ್ದಿಕ್ ಸೋಲು ಕಂಡಿದ್ದರು. ಸದ್ಯ ಅವರು ಎನ್ ಸಿಪಿ ಸೇರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.