K H Muniyappa | ಕಾಂಗ್ರೆಸ್ ಗೆ ಬೈ ಬೈ ಹೇಳಲಿದ್ದಾರಾ ಕೆ.ಹೆಚ್ ಮುನಿಯಪ್ಪ..?
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಗರಿಗೆದರುತ್ತಿವೆ. ಈ ನಡುವೆ ಸುಮಾರು 30 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಂಸದರಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಜೆಡಿಎಸ್ ಸೇರುತ್ತಾರೆ ಎಂಬ ಸುದ್ದಿ ಕೋಲಾರ ಜಿಲ್ಲೆಯಲ್ಲಿ ಹರಿದಾಡುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸೋಲಿನ ರುಚಿ ಕಂಡಿರುವ ಕೆ.ಹೆಚ್.ಮುನಿಯಪ್ಪ ಜೆಡಿಎಸ್ ಪಕ್ಷ ಸೇರಲು ಒಲವು ತೋರಿಸಿದ್ದಾರಂತೆ. ಅಲ್ಲದೇ ಪಕ್ಷ ಸೇರ್ಪಡೆ ಬಗ್ಗೆ ಈಗಾಗಲೇ ಹೆಚ್ ಡಿ ದೇವೇಗೌಡರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಕೂಡ ಜಿಲ್ಲೆಯ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ಲೋಕ ಸಮರದಲ್ಲಿ ಸೋತ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನ ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಮಾಜಿ ಕೇಂದ್ರ ಸಚಿವರಲ್ಲಿದೆ. ಅಲ್ಲದೇ ಇತ್ತೀಚೆಗೆ ತಮ್ಮ ಮಾತಿಗೆ ಬೆಲೆ ಕೊಡದೇ ಕೊತ್ತನೂರು ಮಂಜುನಾಥ್ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ಕೆ.ಹೆಚ್ ಮುನಿಯಪ್ಪ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಕಳೆದ 30 ವರ್ಷಗಳಿಂದ ಕೋಲಾರ ರಾಜಕೀಯದಲ್ಲಿ ಕೆ.ಹೆಚ್.ಮುನಿಯಪ್ಪ ತಮ್ಮದೇಯಾದ ಹಿಡಿತವನ್ನು ಸಾಧಿಸಿದ್ದರು.
ಪಕ್ಷದ ಎಲ್ಲೆ ಮೀರಿ ವಿವಿಧ ಪಕ್ಷಗಳ ಮುಖಂಡರ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಆದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೇ ಮುನಿಯಪ್ಪ ಅವರಿಗೆ ಮುಳುವಾದರು. ಶತಾಯ ಗತಾಯ ಅವರನ್ನ ಸೋಲಿಸಲೇಬೇಕು ಎಂದು ಜಿಲ್ಲಾ ನಾಯಕರು ಪಣ ತೊಟ್ಟಂತೆ, ಹೊಸ ಮುಖಕ್ಕೆ ಬೆಂಬಲ ಸೂಚಿಸಿದರು. ಇದರ ಜೊತೆಗೆ ಜಿಲ್ಲೆಯಲ್ಲಿ ಕೆ.ಹೆಚ್. ಮುನಿಯಪ್ಪ ಅವರ ಬಗ್ಗೆ ಜನರಲ್ಲಿಯೂ ಅಸಮಾಧಾನ ಇತ್ತು. ಈ ಎಲ್ಲಾ ಕಾರಣಗಳಿಂದ ಲೋಕಸಭಾ ಚುನಾವಣೆಯಲ್ಲಿ ಅವರು ಸೋಲಬೇಕಾಯ್ತು.
ಅಲ್ಲದೇ ಜಿಲ್ಲಾ ಕಾಂಗ್ರೆಸ್ ನಲ್ಲಿ ಅವರ ಹಿಡಿತ ಕೂಡ ಕಡಿಮೆ ಆಗಿದೆ. ಹೀಗಾಗಿ ಈಗ ಜೆಡಿಎಸ್ ಪಕ್ಷ ಸೇರಿ ಮುಂದಿನ ಚುನಾವಣೆಯಲ್ಲಿ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡುವ ಪ್ಲಾನ್ ನಲ್ಲಿದ್ದಾರೆ ಕೆ.ಹೆಚ್ ಮುನಿಯಪ್ಪ.
ಇನ್ನು ಜೆಡಿಎಸ್ ಪಕ್ಷ ಸೇರುವ ಬಗ್ಗೆ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಕೆ.ಹೆಚ್.ಮುನಿಯಪ್ಪ ಬೆಂಬಲಿಗರ ಸಲಹೆ ಪಡೆದುಕೊಳ್ಳಲಿದ್ದಾರೆ. ಕೋಲಾರದ ತಮ್ಮ ನಿವಾಸದಲ್ಲಿ ಮುಂದಿನ ರಾಜಕೀಯ ತೀರ್ಮಾನಕ್ಕಾಗಿ ಬೆಂಬಲಿಗರ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.