ಚಂಡೀಘರ್: ಶಾಲಾ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ನಾಲ್ವರು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಪಂಜಾಬಿನಲ್ಲಿ ನಡೆದಿದೆ.
ಸಂಗ್ರೂರ್ ಜಿಲ್ಲೆಯ ಲಾಂಗೋವಾಲ್ ಬಳಿ ಈ ಘಟನೆ ನಡೆದಿದ್ದು, ಒಂದೇ ಕುಟುಂಬದ ಇಬ್ಬರು ಸೇರಿದಂತೆ ನಾಲ್ವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ. ಸದ್ಯ , ಸಂಗ್ರೂರಿನ ಸಿವಿಲ್ ಆಸ್ಪತ್ರೆಯಲ್ಲಿ ಗಾಯಗೊಂಡಿರುವವರಿಗೆ ಚಿಕಿತ್ಸೆ ಮುಂದುವರಿದಿದೆ.
ಶಾಲಾ ಪ್ರಾಂಶುಪಾಲರು,ನಿರ್ವಹಣಾ ಮಂಡಳಿ, ಚಾಲಕ ಮತ್ತು ಇತರರ ವಿರುದ್ಧ ಐಪಿಸಿಯ ಸೆಕ್ಷನ್ 304 ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ಸಂಗ್ರೂರ್ ಉಪ ಆಯುಕ್ತ ಘನ್ಶ್ಯಾಮ್ ಥೋರಿ ತಿಳಿಸಿದ್ದಾರೆ. ಏತನ್ಮಧ್ಯೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದಾರೆ.








