ವಿದ್ಯಾರ್ಥಿಗಳನ್ನ ಕರೆತರಲು ಉಕ್ರೇನ್ ನ ನೆರೆಯ ದೇಶಗಳಿಗೆ ತೆರಳಿದ ಕೇಂದ್ರ ಸಚಿವರು…
ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮುಂದುವರೆಸುತ್ತಿದೆ. ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಆರ್ಕೆ ಸಿಂಗ್ ಅವರು ಕಾರ್ಯಾಚರಣೆಯನ್ನು ಸಂಘಟಿಸಲು ಮತ್ತು ವಿದ್ಯಾರ್ಥಿಗಳಿಗೆ, ಸರ್ಕಾರಕ್ಕೆ ಸಹಾಯ ಮಾಡಲು ಉಕ್ರೇನ್ ನ ನೆರೆಯ ದೇಶಗಳಿಗೆ ತೆರಳಲಿದ್ದಾರೆ.ಎಂದು ಮೂಲಗಳು ತಿಳಿಸಿವೆ.
ಈ ಮಂತ್ರಿಗಳು ಭಾರತದ “ವಿಶೇಷ ರಾಯಭಾರಿಗಳಾಗಿ” ಅಲ್ಲಿಗೆ ಹೋಗುತ್ತಾರೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.
ಭಾನುವಾರ ಉಕ್ರೇನ್ ಬಿಕ್ಕಟ್ಟಿನ ಕುರಿತು ನಡೆದ ಸಭೆಯ ಅಧ್ಯಕ್ಷತೆಯನ್ನ ಮೋದಿ ವಹಿಸಿಕೊಂಡಿದ್ದರು. ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದು ಮತ್ತು ಅವರನ್ನು ಸ್ಥಳಾಂತರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ಹೇಳಿದೆ.
ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರವನ್ನು ತ್ವರಿತಗೊಳಿಸಲು ಉಕ್ರೇನ್ನ ನೆರೆಯ ರಾಷ್ಟ್ರಗಳೊಂದಿಗೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.