
ಈತನಿಗೆ ಇನ್ನೂ 20 ವರ್ಷ ಭರ್ತಿಯಾಗಿಲ್ಲ. ಆಗಲೇ ಚೊಚ್ಚಲ ಫಿಫಾ ವಿಶ್ವಕಪ್ ಆಡಿದ ಬ್ರೇಜಿಲ್‍ನ ಹದಿಹರೆಯದ ಯುವಕ. ಜುಲೈ 21ಕ್ಕೆ ತನ್ನ 20ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾನೆ. ಹೌದು, ಈತ ರಿಯಲ್ ಮ್ಯಾಡ್ರಿಡ್ ತಂಡದ ಪ್ರಮುಖ ಸ್ಟ್ರೈಕರ್, ಬ್ರೆಜಿಲ್ ತಂಡದ ಭವಿಷ್ಯದ ಸೂಪರ್‍ಸ್ಟಾರ್. ಮುಂದೊಂದು ದಿನ ಕ್ರಿಸ್ಟಿಯಾನೊ ರೊನಾಲ್ಡೊ, ಮೆಸ್ಸಿಯ ಸ್ಥಾನವನ್ನು ತುಂಬುವ ಎಲ್ಲಾ ಅರ್ಹತೆಗಳು ಈ ಆಟಗಾರನಲ್ಲಿದೆ.
ಹೌದು, ಫುಟ್‍ಬಾಲ್ ಆಟದ ಮಹಿಮೆಯೇ ಅಂತಹುದ್ದು. ಹೇಳಿಕೇಳಿ ಅದು ಜನಸಾಮಾನ್ಯರ ಆಟ. ಇಲ್ಲಿ ಜಾತಿ, ಧರ್ಮ, ಅಂತಸ್ತು ಯಾವುದು ಕೂಡ ಲೆಕ್ಕಕ್ಕೇ ಬರಲ್ಲ. ಪ್ರತಿಭೆ, ಸಾಮಥ್ರ್ಯ, ಬದ್ದತೆ, ಪರಿಶ್ರಮ, ಸ್ಪಷ್ಟವಾದ ಗುರಿ ಇದ್ರೆ ಸಾಕು. ಸಿರಿತನ ಅವರನ್ನು ಹುಡುಕಿಕೊಂಡು ಬರುತ್ತದೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಹುಡುಗರು ಇಂದು ಫುಟ್‍ಬಾಲ್ ಜಗತ್ತಿನ ಶ್ರೀಮಂತ ಕ್ರೀಡಾತಾರೆಗಳಾಗಿದ್ದಾರೆ. ಇಲ್ಲಿ ಒಬ್ಬೊಬ್ಬ ಆಟಗಾರರದ್ದು ಒಂದೊಂದು ಕಥೆ. ಪ್ರತಿ ಕಥೆಯೂ ಸ್ಪೂರ್ತಿದಾಯಕವಾಗಿರುತ್ತದೆ. ಬಹುತೇಕ ಆಟಗಾರರ ಬದುಕಿನ ಹಾದಿಯನ್ನು ನೋಡಿದಾಗ ನಮ್ಮ ಕಷ್ಟಗಳು ಏನು ಅಲ್ಲ ಅಂತ ಅನ್ಸುತ್ತೆ. ಬಡತನದ ಬೇಗೆಯಲ್ಲಿ ಅರಳುವ ಫುಟ್‍ಬಾಲ್ ಆಟಗಾರರ ಸಾಧನೆಯ ಹಿಂದೆ ಕಣ್ಣೀರಿನ ಕಥೆ ಇದೆ. ಅಪ್ಪ- ಅಮ್ಮನ ತ್ಯಾಗದ ಮಹಿಮೆ ಇದೆ. ಅಬ್ಬಾ… ಜೀವದ ಹಂಗು ತೊರೆದು ಮುನ್ನುಗ್ಗಿ ಆಡುವ ಜಿದ್ದಾಜಿದ್ದಿನ ಹೋರಾಟದ ಹಿಂದೆ ಬಡತನದ ಬೆಂಕಿಯ ಕಿಡಿಯೂ ಇದೆ. ಹಾಗಾಗಿಯೇ ಇವರು ಫುಟ್‍ಬಾಲ್ ಜಗತ್ತಿನಲ್ಲಿ ಬೆಂಕಿಯ ಜ್ವಾಲೆಯಂತೆ ಪ್ರಜ್ವಲಿಸುತ್ತಿದ್ದಾರೆ. ಈ ಕಥೆಗೆ ಮತ್ತೊಂದು ಸೇರ್ಪಡೆ ಬ್ರೆಜಿಲ್‍ನ ಎಂಡ್ರಿಕ್ ಫೆಲಿಪೆ ಮೊರೇರಾ ಡಿ ಸೌಸಾ ಫಾರ್ವರ್ಡ್.
From Extreme Poverty to Real Madrid: Brazil Star Endrick’s Emotional Letter to Brother Will Melt Your Heart!
ಕನಸನ್ನೇ ಹೆಸರಾಗಿಸಿಕೊಂಡ ಅಪರೂಪದ ಪ್ರತಿಭೆ..!
ಹೌದು, ಎಂಡ್ರಿಕ್ ಫೆಲಿಫೆ ಮೊರೇರಾ ಡಿ ಸೌಸ. ಈತನ ನಿಜವಾದ ಹೆಸರು. ಫಾರ್ವರ್ಡ್ ಅನ್ನೋದು ಈತ ಸ್ವಯಂಘೋಷಿತವಾಗಿ ಸೇರಿಸಿಕೊಂಡ ಪದ. ಯಾಕಂದ್ರೆ ಆತನಿಗೆ ಬುದ್ಧಿಬಂದಾಗಿನಿಂದಲೇ ತಾನು ಅದ್ಭುತ ಫಾರ್ವರ್ಡ್ ಆಟಗಾರನಾಗಬೇಕು. ರಿಯಲ್ ಮ್ಯಾಡ್ರಿಡ್ ತಂಡದ ಪರ ಆಡಬೇಕು, ಬ್ರೇಜಿಲ್ ತಂಡವನ್ನು ಪ್ರತಿನಿಧಿಸಬೇಕು ಎಂದು ಕನಸು ಕಂಡಿದ್ದ. ತನ್ನ ಕನಸು ನನಸು ಮಾಡಲು ತನ್ನ ಹೆಸರಿನ ಮುಂದೆ ಫಾರ್ವರ್ಡ್ ಎಂಬುದನ್ನು ಸೇರಿಸಿಕೊಂಡಿದ್ದ. ಈ ಹುಡುಗ ಅಂದುಕೊಂಡಂತೆ 18ರ ಹರೆಯದಲ್ಲೇ ರಿಯಾಲ್ ಮ್ಯಾಡ್ರಿಡ್ ತಂಡವನ್ನು ಸೇರಿಕೊಳ್ಳುತ್ತಾನೆ. 17ನೇ ವಯಸ್ಸಿನಲ್ಲೇ ಬ್ರೇಜಿಲ್ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗುತ್ತಾನೆ. ಈಗಾಗಲೇ ಚೊಚ್ಚಲ ವಿಶ್ವಕಪ್‍ನಲ್ಲಿ ಆಡುವ ಮೂಲಕ ಭವಿಷ್ಯದ ತಾರೆ ಅಂತನೇ ಬಿಂಬಿತನಾಗಿದ್ದಾನೆ.
ಬಾಲ್ಯದಲ್ಲಿ ಕಡು ಬಡತನವಿದ್ರೂ ಅಪ್ಪ – ಅಮ್ಮನ ತ್ಯಾಗದ ಸಿರಿತನದಿಂದ ಬಡತನ ಏನು ಅಂತನೇ ಗೊತ್ತಾಗಲಿಲ್ಲ. ಆದ್ರೆ ಅಪ್ಪ – ಅಮ್ಮನ ಕಷ್ಟಗಳನ್ನು ಕಣ್ಣಾರೆ ನೋಡಿದ್ದ ಎಂಡ್ರಿಕ್, ಆ ದಿನಗಳು ಹೇಗಿದ್ದವು..? ಅಪ್ಪ – ಅಮ್ಮ ಪಡುತ್ತಿದ್ದ ಕಷ್ಟಗಳು ಏನು ಎಂಬುದನ್ನು ತನಗಿಂತ 13 ವರ್ಷ ಚಿಕ್ಕವನಾಗಿರುವ ತಮ್ಮನಿಗೆ ಪತ್ರದ ಮೂಲಕ ಹೃದಯಸ್ಪರ್ಶಿಯಾಗಿ ಹೇಳಿಕೊಂಡಿದ್ದಾನೆ. ತಮ್ಮನಿಗೆ ಬರೆದ ಪತ್ರದಲ್ಲಿರುವ ಪ್ರತಿ ಅಕ್ಷರಗಳು ಹೃದಯ ತುಂಬಿ ಬರುತ್ತಿದೆ.ತನ್ನ ತಮ್ಮನಿಗೆ ನೀಡಿರುವ ಉಡುಗೊರೆ ಏನು ಎಂಬುದನ್ನು ಈ ಪತ್ರದಲ್ಲಿ ಹೇಳಿದ್ದಾನೆ.
ಪ್ರೀತಿಯ ಸಹೋದರಿಗೆ ಅಣ್ಣ ಬರೆದ ಭಾವನಾತ್ಮಕ ಪತ್ರ..!
ಪ್ರೀತಿಯ ಸಹೋದರ ನೋವಾ..!
ಐ ಲವ್ ಯೂ ಬ್ರದರ್.
ಇದು ನನ್ನ ಅಂತರಂಗದಿಂದ ಮಿಡಿಯುವ ಮೊದಲ ನುಡಿ. ನೀನು ಹುಟ್ಟಿದ ದಿನದಂದಲೇ ನಮ್ಮಿಬ್ಬರ ನಡುವೆ ಅವಿನಾಭಾವ ಸಂಬಂಧವಿದೆ. ನೀನು ಈ ಭೂಮಿಗೆ ಬಂದಾಗ ನನಗೆ 13ರ ಹರೆಯ. ಆಗಲೇ ನಾನು ಮೈದಾನದಲ್ಲಿ ಗೋಲು ಹೊಡೆಯುತ್ತಿದ್ದೆ. ನೀನು ಹುಟ್ಟಿದ ಖುಷಿಯನ್ನು ಹಂಚಿಕೊಳ್ಳಲು ಅಪ್ಪ ನನಗೆ ಫೋನ್ ಮಾಡಿದಾಗ ನಾನು ಮೈದಾನದಲ್ಲಿ ಆಡುತ್ತಿದೆ. ನನ್ನ ಮಿತ್ರ ಎಂಡ್ರಿಕ್ ಗೋಲು ಹೊಡೆದ ಸಂಭ್ರಮದಿಂದ ಕಿರುಚಾಡುತ್ತಿದ್ದ. ಪಂದ್ಯ ಮುಗಿದ ನಂತರ ಅಪ್ಪನ ಜೊತೆ ಮಾತನಾಡಿದಾಗ ನನಗೆ ಕೇಳಿಸಿದ್ದ ನಿನ್ನ ಮೊದಲ ಕೂಗು.
ಹೌದು, ಕೊನೆಗೂ ನೀನು ನನ್ನ ಯಶಸ್ಸನ್ನು ಸಂಭ್ರಮಿಸಲು, ಕಣ್ಣಾರೆ ನೋಡಲು ಈ ಭೂಮಿಗೆ ಬಂದೆ. ನಿನ್ನ ನೋಡಲು ಆಸ್ಪತ್ರೆಗೆ ಓಡೋಡಿ ಬಂದೆ. ನಿನಗಾಗಿ ಉಡುಗೊರೆ ನೀಡಲು ನನ್ನ ಕೈಯಲ್ಲಿ ಆಗ ದುಡ್ಡು ಇರಲಿಲ್ಲ. ಆದ್ರೆ ಪಂದ್ಯ ಗೆದ್ದು ಪ್ರಶಸ್ತಿ ಪಡೆದ ನನ್ನ ಕೈಯಲ್ಲಿ ಚಿನ್ನದ ಚೆಂಡು ಇತ್ತು. ಅದನ್ನು ನಿನ್ನ ಕೋಮಲವಾದ ಕೈಗೆ ನೀಡಿದ್ದೆ. ಸಹೋದರ ನಾವೇನು ಶ್ರೀಮಂತ ಕುಟುಂಬದವರಲ್ಲ. ಆದ್ರೆ ನಾವು ಹುಟ್ಟಿರೋದೇ ಫುಟ್‍ಬಾಲ್ ಆಟದ ಉಸಿರಿನಲ್ಲಿ. ನಿಜ ಈಗ ನಮಗೆ ಬಡತನವಿದೆ. ಇದು ಎಲ್ಲವೂ ಸರಿ ಹೊಗುತ್ತದೆ. ಮುಂದೆ ನಾನು ರಿಯಲ್ ಮ್ಯಾಡ್ರಿಡ್ ತಂಡವನ್ನು ಸೇರಿಕೊಳ್ಳುತ್ತೇನೆ. ಅಲ್ಲಿಗೆ ನಮ್ಮ ಬಡತನದ ಬದುಕು ಬೇಗನೇ ಬದಲಾಗುತ್ತದೆ. ನಿನಗೆ ಕಷ್ಟ ಏನು..? ಬಡತನ ಅಂದ್ರೆ ಹೇಗಿರುತ್ತದೆ ಎಂಬುದೇ ಗೊತ್ತಾಗಲ್ಲ. ಫುಟ್‍ಬಾಲ್ ಆಟ ನಮ್ಮ ಬಡತನವನ್ನು ನೀಗಿಸುತ್ತದೆ. ಆದ್ರೂ ನಮ್ಮ ಕಷ್ಟದ ದಿನಗಳನ್ನು ಎಂದು ಮರೆಯಬಾರದು ಅಂತ ಈ ಪತ್ರವನ್ನು ನಿನಗೆ ಬರೆಯುತ್ತಿದ್ದೇನೆ. ಇದನ್ನು ನೀನು ಯಾವಾಗ ಓದುತ್ತಿಯೋ ಅಂತ ನನಗೆ ಗೊತ್ತಿಲ್ಲ.
ಬ್ರದರ್.. ನಮ್ಮ ಬದುಕಿನ ಪುಟಗಳು ಆರಂಭವಾಗುವುದು ಒಂದು ಚೆಂಡಿನಿಂದಲೇ. ಅದು ಕೊನೆಯಾಗೋದು ಚೆಂಡಿನಿಂದಲೇ. ನಾನು ಮಗುವಾಗಿದ್ದಾಗ ನಿನ್ನಂತೆ ನಾನು ಆಟಿಕೆಗಳ ಜೊತೆ ಆಟ ಆಡ್ತಿರಲಿಲ್ವಂತೆ. ನನ್ನದ್ದು ಏನಿದ್ರೂ ಟೇಪ್ ಸುತ್ತಿದ್ದ ಕಾಗದದ ಚೆಂಡು, ಹಳೆಯ ಫುಟ್‍ಬಾಲ್, ಅಥವಾ ಬ್ಯಾಸ್ಕೇಟ್ ಬಾಲ್. ಎಲ್ಲವನ್ನೂ ಕಾಲಿನಿಂದಲೇ ಒದೆಯುತ್ತಿದ್ದೆ ಅಂತ ಅಮ್ಮ ಹೇಳುತ್ತಿದ್ದಳು. ಅಪ್ಪ ಫುಟ್‍ಬಾಲ್ ಆಡುತ್ತಿದ್ದಾಗ ಬ್ರಾಜುಕಾ ವಿಶ್ವಕಪ್ ಚೆಂಡನ್ನು ಮನೆಗೆ ತಂದಾಗ ಅದನ್ನು ಅಪ್ಪಿಕೊಂಡೇ ಮಲಗುತ್ತಿದೆ ಅಂತ ಅಪ್ಪ ಹೇಳ್ತಿದ್ದÀ್ದ. ಯಾಕಂದ್ರೆ ಫುಟ್‍ಬಾಲ್ ಆಟ ನಮ್ಮ ರಕ್ತದಲ್ಲೇ ಇದೆ. ನಿನಗೆ ಗೊತ್ತಾ..? ನನ್ನ ಬಳಿ ಯಾರಾದ್ರೂ ನಿನ್ನ ಹೆಸರು ಏನು ಅಂತ ಕೇಳಿದ್ರೆ, ಎಂಡ್ರಿಕ್ ಫಿಲಿಪೆ ಮೊರೇರಾ ಡಿ ಸೌಸ ಜೊತೆ ಫಾರ್ವರ್ಡ್ ಎಂಬ ಪದವನ್ನು ಸೇರಿಸಿ ಹೇಳುತ್ತಿದ್ದೆ. ನನಗೆ ಗೊತ್ತಿತ್ತು. ಮುಂದೊಂದು ದಿನ ಫಾರ್ವರ್ಡ್ ಆಟಗಾರನಾಗುತ್ತೇನೆ ಎಂಬ . ಆತ್ಮವಿಶ್ವಾಸ ನನ್ನಲಿತ್ತು ಪುಟ್ಟ.
.
ಹೆತ್ತವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ ಬ್ರದರ್..!
ನಿಜ, ನಮ್ಮ ಬದುಕು ಸಿರಿತನದಲ್ಲಿರಲಿಲ್ಲ. ಆದ್ರೆ ನಮ್ಮ ಸ್ಥಿತಿಗತಿಗಳ ಬಗ್ಗೆ ಜಗತ್ತು ಏನು ಬೇಕಾದ್ರೂ ಹೇಳಬಹುದು. ನಮಗೆ ಕಷ್ಟ ಇತ್ತು. ಆದ್ರೆ ಕಷ್ಟ ಇದೆ ಅಂತ ಅಪ್ಪ – ಅಮ್ಮ ಯಾವತ್ತೂ ನಮಗೆ ತೋರಿಸಲಿಲ್ಲ. ಅಪ್ಪ – ಅಮ್ಮನ ತ್ಯಾಗದಿಂದ ನಾವು ಸುಂದರವಾದ ಬಾಲ್ಯವನ್ನು ಕಳೆದಿದ್ದೇವೆ. ಹಸಿವನ್ನು ನೀಗಿಸುವಷ್ಟು ಆಹಾರವನ್ನು ಅಪ್ಪ – ಅಮ್ಮ ನೀಡುತ್ತಿದ್ದರು. ಆದ್ರೆ ನಾವು ಇಷ್ಟಪಟ್ಟಿರುವುದು ನಮಗೆ ಸಿಗುತ್ತಿರಲಿಲ್ಲ ಅಷ್ಟೇ. ನಮ್ಮ ಬಗ್ಗೆ ಕಟ್ಟು ಕಥೆಗಳನ್ನು ಬರೆಯುವವರಿಗೆ ನಮ್ಮಮ್ಮ ಹೇಳುವುದು ಹೀಗೆ.. ನನ್ನ ಮಕ್ಕಳಿಗೆ ಅನ್ನವಿಲ್ಲದಂತೆ ನೋಡಿಕೊಳ್ಳಲು ನಾನೇನು ಅಶಕ್ತಳಲ್ಲ. ನನ್ನ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ನನಗೆ ಗೊತ್ತಿದೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಗಟ್ಟಿಗಿತ್ತಿ ನಮ್ಮಮ್ಮ ಸಹೋದರ. ಕೈಯಲ್ಲಿ ದುಡ್ಡು ಇಲ್ಲದಿದ್ರೂ ಅದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಳು. ಕೆಲವೊಂದು ಬಾರಿ ಬಾತ್‍ರೂಮ್‍ನಲ್ಲಿ ಒಬ್ಬಳೆ ಜೋರಾಗಿ ಅಳುತ್ತಿದ್ದಳು. ಇದು ನನಗೆ ಗೊತ್ತಾದಾಗ ಚಿಂತೆ ಮಾಡಬೇಡ ಅಮ್ಮ.. ನಾನು ಫುಟ್‍ಬಾಲ್ ಆಟಗಾರನಾಗಿ ನಮ್ಮ ಎಲ್ಲಾ ಕಷ್ಟಗಳನ್ನು ನಿಭಾಯಿಸುತ್ತೇನೆ ಎಂದು ಧೈರ್ಯ ಹೇಳುತ್ತಿದ್ದೆ. ನನ್ನ ಮಾತುಗಳಿಗೆ ಅವಳು ದ್ವನಿಗೂಡಿಸಿಕೊಂಡು ನನಗೆ ಇನ್ನಷ್ಟು ಆತ್ಮವಿಶ್ವಾಸದ ಮಾತುಗಳನ್ನು ಹೇಳುತ್ತಿದ್ದಳು.
ಅಪ್ಪನ ಕಣ್ಣೀರು ಮತ್ತು ಸೇಬಿನ ಕನಸು..!
ಇದೆಲ್ಲದರ ನಡುವೆ, ನಮ್ಮ ಅಪ್ಪನಿಗೂ ಫುಟ್‍ಬಾಲ್ ಆಟಗಾರನಾಗಬೇಕು ಎಂಬ ಆಸೆ ಇತ್ತು. ಅದು ಕೈಗೂಡಲಿಲ್ಲ. ಆದ್ರೆ ನನ್ನ ಪ್ರತಿಭೆಯನ್ನು ಗುರುತಿಸಿದ್ದ ಅವರು, ನನಗೆ ಯಾವುದರಲ್ಲೂ ಕಡಿಮೆ ಮಾಡಲಿಲ್ಲ. ನನಗೆ ಗೊತ್ತೇ ಆಗದಂತೆ ನನ್ನ ಆಸೆ- ಆಕಾಂಕ್ಷೆಗಳನ್ನು ಈಡೇರಿಸುತ್ತಿದ್ದರು. ಆದ್ರೆ ಒಂದು ಬಾರಿ ನಮ್ಮ ಅಪ್ಪನ ಅಸಹಾಯಕತೆಯನ್ನು ಕಣ್ಣಾರೆ ನೋಡಿದ್ದೆ. ಕಣ್ಣೀರು ಹಾಕುತ್ತಿದ್ದ ಅಪ್ಪನನ್ನು ಸಮಾಧಾನಪಡಿಸಿದೆ. ಅಪ್ಪ ಚಿಂತಿಸಬೇಡ. ನಾನು ಫುಟ್‍ಬಾಲ್ ಆಟಗಾರನಾಗುತ್ತೇನೆ. ಆಗ ನಮ್ಮ ಕಷ್ಟ, ಸಮಸ್ಯೆಗಳು ಎಲ್ಲವೂ ದೂರವಾಗುತ್ತವೆ ಎಂದು ಹೇಳಿ ಅಪ್ಪನಿಗೆ ಧೈರ್ಯ ತುಂಬಿದ್ದೆ. ಅಲ್ಲಿಯ ತನಕ ನನಗೆ ಫುಟ್‍ಬಾಲ್ ಅಂದ್ರೆ ಬರೀ ಆಟವಾಗಿತ್ತು. ನಂತರ ಅದು ನಮ್ಮ ಬದುಕನ್ನು ಬದಲಿಸುವ ಏಕೈಕ ಅಸ್ತ್ರ ಅಂತ ನಾನು ತಿಳಿದುಕೊಂಡೆ. ಅದಕ್ಕಾಗಿ ನಾನೂ ಶ್ರಮಪಟ್ಟೆ. ಆಗ ನನ್ನ ಗುರಿ ಒಂದೇ ಆಗಿತ್ತು. ನಮ್ಮ ಕುಟುಂಬ ಗೌರವದಿಂದ ಬದುಕಬೇಕು ಅಷ್ಟೇ. ಈ ಗುರಿ ಮುಟ್ಟಲು ನನ್ನ ಹಿಂದೆ ಅಪ್ಪ – ಅಮ್ಮನ ತ್ಯಾಗವನ್ನು ಬರೆಯಲು ನನ್ನ ಬಳಿ ಪದಗಳಿಲ್ಲ.
ಅಪ್ಪ – ಅಮ್ಮನ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ..!
ನಾನು ಪಾಲ್ಮೇರಾಸ್ ಅಕಾಡೆಮಿಗೆ ಸೇರಿಕೊಂಡಾಗ ಅಮ್ಮ ಕೂಡ ನನ್ನ ಜೊತೆಗೆ ಸಾವೊ ಪಾಲೊ ನಗರಕ್ಕೆ ಆಗಮಿಸಿದ್ದಳು. ನನ್ನ ಕನಸನ್ನು ನನಸು ಮಾಡಲು ಅಮ್ಮ ಕೂಡ ನನ್ನ ಜೊತೆಯಾದಳು. ಅಪ್ಪ ಕಷ್ಟಪಟ್ಟು ದುಡಿದ ಹಣದಲ್ಲೇ ನಮ್ಮ ಬದುಕು ಸಾಗುತ್ತಿತ್ತು. ಕೈಯದಲ್ಲಿ ದುಡ್ಡು ಇಲ್ಲದಿದ್ದಾಗಲೂ ನನಗೆ ಅಡುಗೆ ಮಾಡಿ ಅವಳು ಒಣಬ್ರೆಡ್ ತಿನ್ನುತ್ತಿದ್ದಳು. ಪ್ರೀತಿಯ ಸಹೋದರ.. ನೀನು ಅಮ್ಮ ಸಿಕ್ಕಾಗ ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಅವಳಿಗೆ ಧನ್ಯವಾದ ಹೇಳು. ಯಾಕಂದ್ರೆ ಅಮ್ಮ ನನ್ನ ಕನಸನ್ನು ಈಡೇರಿಸಲು ತನ್ನ ನೋವನ್ನು ಮುಚ್ಚಿಡುತ್ತಿದ್ದಳು. ಅವಳ ತ್ಯಾಗವಿಲ್ಲದೇ ಇರುತ್ತಿದ್ರೆ ಇಂದು ನಮಗೆ ಈ ವೈಭೋಗ ಇರುತ್ತಿರಲಿಲ್ಲ ಬ್ರದರ್.
ಇನ್ನು ಅಪ್ಪ.. ನಮಗಾಗಿ, ನನಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟಿದ್ರು. ನಮÀಗೋಸ್ಕರ ಕಸಗುಡಿಸುವ ಕೆಲಸ ಮಾಡುತ್ತಿದ್ದರು. ಮುಖದಲ್ಲಿ ಕಿರು ನಗೆ ಬೀರಿಕೊಂಡು ನನ್ನ ಮಗ ಒಂದು ದಿನ ನಿಮ್ಮ ಜೊತೆ ಆಡಲಿದ್ದಾನೆ ಅಂತ ಸೀನಿಯರ್ ಆಟಗಾರರ ಜೊತೆ ಹೇಳಿಕೊಳ್ಳುತ್ತಿದ್ದರು. ಇದು ನಿನಗೆ ಗೊತ್ತಿರಲಿ ಅಂತ ಹೇಳುತ್ತಿದ್ದೇನೆ. ಅಪ್ಪ ಚಿಕ್ಕನಿಂದಲೇ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರ ಹಲ್ಲುಗಳು ಉದುರಿ ಹೋಗಿದ್ದವು. ಹೀಗಾಗಿ ಊಟ ಮಾಡಲು ಆಗುತ್ತಿರಲಿಲ್ಲ. ಬರೀ ಸೂಪ್ ಕುಡಿದುಕೊಂಡು ಹಸಿವು ನೀಗಿಸುತ್ತಿದ್ದರು. ಇದನ್ನು ನೋಡಿದ್ದ ಗೋಲು ಕೀಪರ್ ಜೈಲ್ಸನ್ ಎಲ್ಲಾ ಆಟಗಾರರಿಂದ ಹಣ ಸಂಗ್ರಹಿಸಿ ಅಪ್ಪನ ಹಲ್ಲುಗಳನ್ನು ಸರಿಪಡಿಸಿದ್ದ. ದೇವರು ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾನೆ ಎಂಬುದಕ್ಕೆ ಇದು ಒಂದು ನಿದರ್ಶನ ಸಹೋದರ.
ಅಪ್ಪನ ಹೋರಾಟದ ಬದುಕನ್ನು ಮರೆಯಬಾರದು ಕಂದಾ..!
ಒಂದು ಸೇಬನ್ನು ಕಚ್ಚಿ ತಿನ್ನುವುದೇ ನನ್ನ ಜೀವಮಾನದ ಕನಸು ಅಂತ ಅಪ್ಪ ಅಂದುಕೊಂಡಿದ್ದರು. ದೇವರ ದಯೆಯಿಂದ ಇಂದು ಅವರು ಇಷ್ಟಪಟ್ಟ ಆಹಾರವನ್ನು ತಿನ್ನುತ್ತಿದ್ದಾರೆ. ಹಾಗಂತ ಅಪ್ಪನ ಹೋರಾಟದ ಕಥೆ ಇಲ್ಲಿಗೆ ಮುಗಿದಿಲ್ಲ. ನನ್ನಂತೆ ಅಪ್ಪ ಕೂಡ ಫುಟ್‍ಬಾಲ್ ಆಟಗಾರನಾಗಬೇಕು ಎಂದು ಕನಸು ಕಂಡಿದ್ದರು. ಅದಕ್ಕಾಗಿ ಮನೆ ಬಿಟ್ಟು ಬಂದಿದ್ದರು. ಕೈಯಲ್ಲಿ ದುಡ್ಡಿಲ್ಲದೇ ಬರೀ ನೀರು ಕುಡಿದುಕೊಂಡೇ ಪಾಲ್ಮೇರಾಸ್ ಕ್ರೀಡಾಂಗಣಕ್ಕೆ ತಲುಪಿ ಅಲ್ಲೇ ಟಿಕೆಟ್ ಕೌಂಟರ್‍ನ ಮೇಲ್ಛಾವಣಿಗೆ ಕೆಳಗೆ ಮಲಗಿದ್ದರು. ಮನೆಯ ಖರ್ಚು ನೀಗಿಸಲು ಅವರು ಸ್ಥಳೀಯ ಪಂದ್ಯಗಳನ್ನು ಆಡುತ್ತಿದ್ದರು. ಅಂದು ಅಪ್ಪ ಟಿಕೆಟ್ ಕೌಂಟರ್ ಕೆಳಗೆ ಮಲಗಿದ್ದಾಗ ಮುಂದೊಂದು ದಿನ ನನ್ನ ಮಗ ಇದೇ ಮೈದಾನದ ರಾಜನಾಗುತ್ತಾನೆ ಎಂದು ಅವರು ಕನಸಿನಲ್ಲೂ ಯೋಚನೆ ಕೂಡ ಮಾಡಿರಲಿಲ್ಲ.
ನಾವು ಈಗ ಬಡವರಲ್ಲ..ಫುಟ್‍ಬಾಲ್‍ನಿಂದ ಬಡತನ ಎಂಬುದೇ ಮಾಯವಾಗಿದೆ ಪುಟ್ಟ..!
ನನಗೆ 15 ವರ್ಷ ಆಗಿದ್ದಾಗ ನೀನು ಎರಡು ವರ್ಷದ ಪುಟಾಣಿ. ಆಗಲೇ ನಾನು ವೃತ್ತಿಪರ ಆಟಗಾರನಾಗಿದ್ದೆ. ಅಪ್ಪ – ಅಮ್ಮ ನಮಗೊಸ್ಕರ ಸ್ವಂತ ಮನೆ ಖರೀದಿಸಿದ್ದೇನೆ. ನನ್ನ ಮೊದಲ ಗುರಿ ತಲುಪಿದೆ ಎಂದು ಅಪ್ಪನ ಜೊತೆ ಸೋಫಾದಲ್ಲಿ ಕುಳಿತು ನಿಟ್ಟುಸಿರುಬಿಟ್ಟೆ ಸಹೋದರ.
ಬ್ರದರ್.. ನಾನು ರಿಯಲ್ ಮ್ಯಾಡ್ರಿಡ್ ತಂಡದ ಅಪ್ಪಟ ಅಭಿಮಾನಿ. ಕ್ರಿಸ್ಟಿಯಾನೋ ರೋನಾಲ್ಡೊ ನನ್ನ ಅಚ್ಚುಮೆಚ್ಚಿನ ಆಟಗಾರ. ಅವರ ಪರಿಶ್ರಮ, ಬದ್ದತೆಯನ್ನು ನೋಡಿ ಬೆಳೆದವನು. ಪ್ರತಿಭೆಗಿಂತಲೂ ಕಠಿಣ ಪರಿಶ್ರಮವೇ ಬದುಕನ್ನು ರೂಪಿಸುತ್ತದೆ ಎಂಬುದು ಕ್ರಿಸ್ಟಿಯಾನೋ ಅವರ ನಂಬಿಕೆ. ಹೀಗಾಗಿ ಕ್ರಿಸ್ಟಿಯಾನೋ ಅವರನ್ನು ಭೇಟಿಯಾಗೋದು ನನ್ನ ಇನ್ನೊಂದು ಗುರಿಯಾಗಿತ್ತು. ಅದು ಕೂಡ ಸಾಧ್ಯವಾಯ್ತ್ತು ಸಹೋದರ. ಹಾಗೇ, ರಿಯಾಲ್ ಮ್ಯಾಡ್ರಿಡ್ ತಂಡವನ್ನು ಸೇರಿಕೊಳ್ಳುವ ಆಸೆಯೂ ಈಡೇರಿತ್ತು. ರಿಯಲ್ ಮ್ಯಾಡ್ರಿಡ್ ಕ್ಲಬ್‍ನ ಅಧ್ಯಕ್ಷ ಫ್ಲೋರೆಂಟಿನೊ ಪೆರೆಜ್ ಅಪ್ಪನನ್ನು ನೋಡಿ ಈ ರೀತಿ ಹೇಳಿದ್ರು ಕಂದ.., ಎಂಡ್ರಿಕ್‍ನನ್ನು ಸ್ವಂತ ಮಗನಂತೆ ನೋಡಿಕೊಳ್ಳುವ ಏಕೈಕ ಕ್ಲಬ್ ಅಂದ್ರೆ ರಿಯಲ್ ಮ್ಯಾಡ್ರಿಡ್ ಮಾತ್ರ. ಆ ಮಾತುಗಳನ್ನು ಕೇಳಿದಾಗ ಅಪ್ಪನ ಮುಖದಲ್ಲಿ ಮೂಡಿದ್ದ ಸಾರ್ಥಕತೆಯ ಭಾವವನ್ನು ನೀನು ನೋಡಬೇಕಿತ್ತು ನೋವಾ..! ರಿಯಲ್ ಮ್ಯಾಡ್ರಿಡ್ ತಂಡದ ಪರ ಆಡುತ್ತಿರುವುದು ಮಾತ್ರವಲ್ಲ.. ಈಗ ನಮ್ಮ ದೇಶದ ಪರವಾಗಿಯೂ ಆಡುತ್ತಿದ್ದೇನೆ ಸಹೋದರ.
ತಮ್ಮ.. ನನಗೆ ಈಗ ಯಾವ ಗುರಿಯೂ ಇಲ್ಲ. ನಾನು ಅಂದುಕೊಂಡಿರುವ ಎಲ್ಲಾ ಆಸೆಗಳು ಈಡೇರಿವೆ. ಆದ್ರೆ ನಿನ್ನ ಜೀವನದಲ್ಲಿ ನಿನಗೆ ಇಷ್ಟ ಬಂದಂಗೆ ಬದುಕು. ನೀನು ವೈದ್ಯನಾಗಬಹುದು.. ವಕೀಲನಾಗಬಹುದು.. ಟೆನಿಸ್ ಆಟಗಾರನಾಗಲೂಬಹುದು.. ಆಯ್ಕೆ ನಿನ್ನ ಮುಂದಿದೆ. ಯಾಕಂದ್ರೆ ನಾವು ದುಡ್ಡು ಇಲ್ಲ ಎಂದು ಹೇಳುವ ಸ್ಥಿತಿಯಲ್ಲಿಲ್ಲ ಇವತ್ತು. ನಮ್ಮ ಕುಟುಂಬ ಮೂರು ತಲೆಮಾರುಗಳಿಂದ ಫುಟ್‍ಬಾಲ್ ಕನಸನ್ನು ಬೆನ್ನಟ್ಟುತ್ತಲೇ ಬಂದಿದೆ. ಬಡತನದಿಂದ ಹೊರಬರಲು ಸಾಕಷ್ಟು ಶ್ರಮಪಟ್ಟಿದ್ದೇವೆ. ಈಗ ನಮಗೆ ಬಡತನವಿಲ್ಲ. ಗೌರವದ ಜೀವನವನ್ನು ಸಾಗಿಸುವ ಹಂತಕ್ಕೆ ಬಂದಿದ್ದೇವೆ. ಅಪ್ಪ – ಅಮ್ಮನಿಗೆ ಎಂದೆಂದಿಗೂ ಚಿರಋಣಿ. ನಮ್ಮ ಆಸೆಗಳನ್ನು ಈಡೇರಿಸಿದ ಆ ದೇವರಿಗೆ ಪ್ರಣಾಮಗಳು. ಸಹೋದರ ನಿನ್ನ ಜೀವನ ಖುಷಿ ಖುಷಿಯಾಗಿರಲಿ.. ಅದೇ ನಾನು ನಿನಗೆ ನೀಡುವ ಅತ್ಯುನ್ನತ ಉಡುಗೊರೆ.
ಕಷ್ಟದ ಹಾದಿಯಲ್ಲಿ ಬೆಳೆದ ಬಂದ ಹಾದಿಯನ್ನು ಮರೆಯಬೇಡ ಸಹೋದರ..!
ಇಲ್ಲಿಗೆ ಈ ಪತ್ರವನ್ನು ಮುಗಿಸುತ್ತೇನೆ. ನಮ್ಮ ಸುಂದರವಾದ ಭವಿಷ್ಯ ಆರಂಭವಾಗಿದೆÉ. ಆದ್ರೆ ನಾಳೆ ಏನು ಎಂಬುದು ನಮಗೆ ಗೊತ್ತಿಲ್ಲ. ದೇವರು ನಮಗೆ ನೀಡಿರುವ ಫಲಕ್ಕೆ ಶಿರಬಾಗಿ ತಲೆಬಾಗೋಣ. ಆದ್ರೆ ಒಂದು ನೆನಪಿಟ್ಟುಕೊಂಡಿರು.. ನಮ್ಮ ಬದುಕಿನ ಬೇರುಗಳನ್ನು ಮರೆತ ಕ್ಷಣವೇ ನಮ್ಮ ಯಶಸ್ಸಿನ ಹಾದಿಯ ಹಳಿ ತಪ್ಪಿ ಹೋಗುವ ಅಪಾಯವಿರುತ್ತದೆ. ಅದಕ್ಕಾಗಿಯೇ ನಮ್ಮ ಕುಟುಂಬದ ಚಿತ್ರಣವನ್ನು ನಿನ್ನ ಹೃದಯಧ ಪೋಸ್ಟ್ ಆಫೀಸ್‍ನಲ್ಲಿ ಈ ಪತ್ರದ ಮೂಲಕ ¨ರೆದಿದ್ದೇನೆ.
]
ಅಪ್ಪ- ಅಮ್ಮನ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ..!
ಕೊನೆಯ ಮಾತು… ಸಹೋದರ..ನಮ್ಮ ಇಂದಿನ ಯಶಸ್ಸು, ಸಿರಿತನದ ಹಿಂದೆ ಅಪ್ಪ – ಅಮ್ಮನ ತ್ಯಾಗ.. ಕಣ್ಣೀರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ಅಮ್ಮ ಹಳಸಿದ್ದ ಬ್ರೆಡ್ ತಿಂದಿದ್ದು..
ಅಪ್ಪ ಟಿಕೆಟ್ ಕೌಂಟರ್ ಕೆಳಗೆ ಮಲಗಿದ್ದು..
ಅಮ್ಮ ಬಾತ್ ರೂಮ್‍ನಲ್ಲಿ ಒಂಟಿಯಾಗಿ ಅತ್ತಿದ್ದು..
ಅಪ್ಪ ಸೋಫಾದ ಮೇಲೆ ಕಣ್ಣೀರು ಹಾಕಿದ್ದು..
ಈ ಎಲ್ಲಾ ನೆನಪುಗಳು ನಿನ್ನ ಹೃದಯದಲ್ಲಿ ಜಾಗೃತವಾಗಿರಲಿ ಬ್ರದರ್.
ನಿನ್ನನ್ನು ಹೃದಯದಿಂದ ಪ್ರೀತಿಸುವ
ನಿನ್ನ ಅಚ್ಚುಮೆಚ್ಚಿನ ಅಣ್ಣ
ಎಂಡ್ರಿಕ್ ಫೆಲಿಪೆ ಮೋರೆರಾ ಡಿ ಸೌಸ.. ಫಾರ್ವಡ್..
ಬಡತನದ ಕತ್ತಲೆಯಿಂದ ಸಿರಿತನದ ಬೆಳಕನ್ನು À ಕಂಡ ಅಣ್ಣ ತನ್ನ ಪುಟ್ಟ ತಮ್ಮನಿಗೆ ಬರೆದ ಈ ಪತ್ರವನ್ನು ಓದಿದಾಗ ನಿಜಕ್ಕೂ ಒಂದು ಕ್ಷಣ ಹೃದಯ ತುಂಬಿಬರುತ್ತದೆ. .
ಸನತ್ ರೈ








