G20 ಮೋದಿ – ಸುನಕ್ ಮಾತುಕತೆ ಬೆನ್ನಲ್ಲೇ ಭಾರತೀಯ ವೃತ್ತಿಪರರಿಗೆ 3000 ಯುಕೆ ವೀಸಾ ಘೋಷಿಸಿದ ಇಂಗ್ಲೆಂಡ್
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಜೊತೆ ಮಾತುಕತೆ ನಡೆಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ಯುವ ವೃತ್ತಿಪರರಿಗೆ 3 ಸಾವಿರ ಬ್ರಿಟನ್ ವೀಸಾ ನೀಡಲು ಒಪ್ಪಿಗೆ ನೀಡಿರುವ ಪ್ರಕಟನೆಯನ್ನು ಇಂಗ್ಲೆಂಡ್ ಸರ್ಕಾರ ಹೊರಡಿಸಿದೆ.
ಈ ವೀಸಾ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ರಾಷ್ಟ್ರ ಭಾರತ ಎಂದು ಬ್ರಿಟಿಷ್ ಸರ್ಕಾರ ಹೇಳಿದ್ದು, 18ರಿಂದ 30 ವರ್ಷದೊಳಗಿನ ಭಾರತೀಯ ಪದವೀಧರ ಯುವಕರಿಗೆ ಎರಡು ವರ್ಷಗಳ ವೃತ್ತಿಪರ ಇಂಗ್ಲೆಂಡ್-ಭಾರತ ವೃತ್ತಿಪರ ಯೋಜನೆ ವೀಸಾವನ್ನು ವರ್ಷಕ್ಕೆ 3 ಸಾವಿರ ಯುವಕರಿಗೆ ನೀಡಲಾಗುವುದು ಎಂದು ಇಂಗ್ಲೆಂಡ್ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ರಿಷಿ ಸುನಕ್ ಅವರು ಜಿ20 ಮತ್ತು ಕಾಮನ್‌ವೆಲ್ತ್ ಸೇರಿದಂತೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಮತ್ತು ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಿಷಿ ಸುನಕ್, ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಭಾರತದಂತಹ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಆತುರಪಡುವುದಿಲ್ಲ ಮತ್ತು ಈ ಹಿಂದೆ ಕೆಲವು ವಾರಗಳ ಕಾಲ ಬ್ರಿಟನ್ ಪ್ರಧಾನಿಯಾಗಿದ್ದ ಲಿಜ್ ಟ್ರಸ್ ಅವರಿಗಿಂತ ವಿಭಿನ್ನವಾಗಿ ವ್ಯಾಪಾರ ಒಪ್ಪಂದಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಈ ಕುರಿತು, ಯುನೈಟೆಡ್ ಕಿಂಗ್‌ಡಮ್‌ನೊಂದಿಗಿನ ಬಾಂಧವ್ಯಕ್ಕೆ ಭಾರತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಾವು ವಾಣಿಜ್ಯ ಸಂಪರ್ಕಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ, ಭಾರತದ ರಕ್ಷಣಾ ಸುಧಾರಣೆಗಳ ಸಂದರ್ಭದಲ್ಲಿ ಭದ್ರತಾ ಸಹಕಾರದ ವ್ಯಾಪ್ತಿಯನ್ನು ಹೆಚ್ಚಿಸುವ ಬಗ್ಗೆ ಮತ್ತು ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಬಗ್ಗೆ ಚರ್ಚಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಹಲವು ವಿಶ್ವ ನಾಯಕರ ಜೊತೆಗೆ ಹಲವಾರು ವಿಚಾರಗಳನ್ನು ಚರ್ಚಿಸಿದ್ದಾರೆ.








