ಈಚಲು ಮರದಲ್ಲಿ ಗಣಪನ ರೂಪ – ನೋಡಲು ಬರುತ್ತಿದ್ದಾರೆ ಭಕ್ತರು….
ಬೆಳೆದು ನಿಂತ ಈಚಲು ಮರದಲ್ಲಿ ಗಣೇಶನ ರೂಪ ಕಾಣಿಸಿಕೊಂಡಿದ್ದು, ವಿಘ್ನೇಶ್ವರನ ಭಕ್ತರನ್ನ ಪುಳಕಿತಗೊಳಿಸಿರುವ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಪಟಾಕಿ ಗ್ರೌಂಡ್ ಪಕ್ಕದ ಹೊಲದಲ್ಲಿ ನಡೆದಿದೆ.
ಹಲವು ವರ್ಷಗಳಿಂದಲೂ ಇಲ್ಲಿ ಎರಡು ಈಚಲು ಮರಗಳಿದ್ದು, ಎಲ್ಲ ಮರಗಳಂತೆ ಬೆಳೆದು ನಿಂತಿದ್ದವು ಆದರೆ, ಒಂದು ಈಚಲು ಮರದಲ್ಲಿ ಗಣಪತಿ ಮುಖವನ್ನೇ ಹೋಲುವ ಮೂರ್ತಿ ಆಕಾರ ಮೂಡಿದೆ. ಅದು ನೋಡಲು ಗಣಪತಿಯಂತೆಯೇ ಭಾಸವಾಗುತ್ತಿದೆ. ಕಣ್ಣು, ಕಿವಿ, ಸೊಂಡಿಲು, ಮುಖದ ಆಕಾರ ಸಂಪೂರ್ಣ ಗಣಪತಿಯನ್ನೇ ಹೋಲುತ್ತಿದೆ. ಹಾಗಾಗಿ, ಭಕ್ತರು ನಾ ಮುಂದು ತಾ ಮುಂದು ಎಂದು ಬಂದು ಗಣಪತಿಯನ್ನು ನೋಡಿಕೊಂಡು ಆಶ್ಚರ್ಯ ಚಕಿತರಾಗಿ ಗಣಪನಿಗೆ ಪೂಜೆ ಮಾಡಿಕೊಂಡು ಹೋಗುತ್ತಿದ್ದಾರೆ.
ಈಚಲು ಮರದಲ್ಲಿ ಮೂಡಿರುವ ಗಣಪತಿ ರೂಪದ ಬಗ್ಗೆ ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಇದೀಗ ದಿನಕ್ಕೆ ನೂರಾರು ಜನ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿವೆ. ಅವೆಲ್ಲವೂ ಕೂಡ ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ, ಈ ಈಚಲು ಮರದ ಉದ್ಭವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹುಟ್ಟಿರೋದು ಸ್ಥಳೀಯರು ಹಾಗೂ ಆಸ್ತಿಕರ ತೀವ್ರ ತರವಾದ ಭಕ್ತಿಗೆ ಕಾರಣವಾಗಿದೆ.








