ಬೆಂಗಳೂರು: ಇತ್ತೀಚೆಗೆ ಹಲವು ದಿನಗಳಿಂದ ಬೆಲೆ ಏರಿಕೆಯಾಗುತ್ತಿದ್ದು, ಬೆಳ್ಳುಳ್ಳಿ ದರ ಕೂಡ ಈ ಸಾಲಿಗೆ ಬಂದಿದೆ.
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏರಿಕೆಯಾಗಿದ್ದು, 500 ರೂ. ಗಡಿ ದಾಟಿದೆ.
ಟೊಮೆಟೋ, ಈರುಳ್ಳಿ ದರ ಶತಕ ದಾಟಿದ್ದವು. ಸದ್ಯ ಗ್ರಾಹಕರಿಗೆ ಬೆಳ್ಳುಳ್ಳಿಯ ದರ ಏರಿಕೆಯಾಗಿದ್ದು, ಬರೋಬ್ಬರಿ ಅರ್ಧ ಸಾವಿರವಾಗಿದೆ. ಪ್ರತಿಯೊಂದು ಆಹಾರಕ್ಕೂ ಬೆಳ್ಳುಳ್ಳಿ ಬೇಕು. ಆದರೆ, ಈ ಬಾರಿ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ (Garlic Rate) ಬೆಲೆ ಸರಿಯಾಗಿ ಬಂದಿಲ್ಲ. ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ಹಾಪ್ ಕಾಮ್ಸ್‍ನಲ್ಲಿ 500ರ ಗಡಿ ದಾಟಿದೆ.
ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ. ರಾಜ್ಯದಲ್ಲಿ ಹೆಚ್ಚಾಗಿ ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿತ್ತು. ಸದ್ಯ ಅಲ್ಲಿಂದ ಕೂಡ ಈ ಬಾರಿ ಬೆಳ್ಳುಳ್ಳಿ ಬಂದಿಲ್ಲ. ಹೀಗಾಗಿ ಬೆಳ್ಳುಳ್ಳಿ ದರ ಏರಿಕೆಯಾಗಿದೆ.