Asia Cup: ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವತ್ತ ಗಿಲ್ ಹೆಜ್ಜೆ…
Gill’s step towards becoming No.1 in ODI batsmen’s ranking
ಏಷ್ಯಾಕಪ್-2023ರಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚುತ್ತಿರುವ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ಇದೀಗ ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವತ್ತ ಮುಖ ಮಾಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಸರ್ವಶ್ರೇಷ್ಠ ಬ್ಯಾಟಿಂಗ್ ಫಾರ್ಮ್ ಹೊಂದಿರುವ ಗಿಲ್, ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಈಗಾಗಲೇ 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ಏಷ್ಯಾಕಪ್‌ನಲ್ಲೂ ಅಬ್ಬರದ ಬ್ಯಾಟಿಂಗ್‌ನಿಂದ ಮಿಂಚುತ್ತಿರುವ ಆರಂಭಿಕ ಬ್ಯಾಟರ್, ಇದೀಗ ವಿಶ್ವದ ನಂ.1 ಬ್ಯಾಟರ್ ಆಗುವ ಅವಕಾಶ ಹೊಂದಿದ್ದು, ಆ ಮೂಲಕ ಮುಂಬರುವ ಏಕದಿನ ವಿಶ್ವಕಪ್‌ಗೆ ಗ್ರ್ಯಾಂಡ್ ಎಂಟ್ರಿಕೊಡುವ ನಿರೀಕ್ಷೆ ಹೊಂದಿದ್ದಾರೆ.
ಈ ಬಾರಿಯ ಏಷ್ಯಾಕಪ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕ ಬಾರಿಸಿದ್ದಾರೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ 10 ರನ್‌ಗಳಿಸಿ ನಿರಾಸೆ ಮೂಡಿಸಿದ್ದ ಗಿಲ್, ನಂತರ ನೇಪಾಳ ವಿರುದ್ಧ ಅಜೇಯ 67 ರನ್‌ಗಳಿಸಿದ್ದರು. ಇದಾದ ನಂತರ ಸೂಪರ್-4ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 58 ರನ್‌ಗಳಿಸಿ ಮಿಂಚಿದ್ದ ಶುಭ್ಮನ್ ಗಿಲ್, ಬಳಿಕ ಶ್ರೀಲಂಕಾ ವಿರುದ್ಧ 19 ರನ್‌ಗಳಿಗೆ ಔಟಾಗಿ ನಿರಾಸೆ ಅನುಭವಿಸಿದ್ದರು.
ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ಲಯ ಕಂಡುಕೊಂಡ ಆರಂಭಿಕ ಬ್ಯಾಟರ್, 121(133) ಶತಕ ಸಿಡಿಸಿ ಅಬ್ಬರಿಸಿದ್ದರು. ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 5ನೇ ಶತಕ ದಾಖಲಿಸಿರುವ ಗಿಲ್, ಇದೀಗ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರುವತ್ತ ದಾಪುಗಾಲಿಟ್ಟಿದ್ದು, ಇದಕ್ಕಾಗಿ ಶ್ರೀಲಂಕಾ ವಿರುದ್ಧ ನಡೆಯುವ ಏಷ್ಯಾಕಪ್‌ನ ಫೈನಲ್‌ನಲ್ಲಿ ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್ ಆಡುವ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಸೆ.10ರಂದು ನಡೆದ ಏಷ್ಯಾಕಪ್ ಸೂಪರ್-4 ಹಂತದ ಪಾಕಿಸ್ತಾನ ವಿರುದ್ದದ ಪಂದ್ಯದ ಬಳಿಕ 763 ರೇಟಿಂಗ್ ಹೊಂದಿದ್ದರು. ಆದರೆ ಇದೀಗ ಬಾಂಗ್ಲಾದೇಶದ ವಿರುದ್ಧ ಶತಕ ಬಾರಿಸಿರುವ ಗಿಲ್, ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆಯುವ ಎಲ್ಲಾ ಅವಕಾಶ ಹೊಂದಿದ್ದಾರೆ. ಮತ್ತೊಂದೆಡೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನದ ನಾಯಕ ಬಾಬರ್ ಆಜ಼ಂ, ಏಷ್ಯಾಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿರುವುದರ ಪರಿಣಾಮ ಗಿಲ್, ಸುಲಭವಾಗಿ ನಂ.1 ಪಟ್ಟಕ್ಕೇರುವ ಅವಕಾಶ ಕಲ್ಪಿಸಿದೆ.