ಜನನಾಯಕರ ಆಪ್ತ ಸಹಾಯಕರು ಎಂಬ ಅತ್ಯಾಪ್ತ ನಂಬಿಕಸ್ತರು, ತ್ಯಾಗಮೂರ್ತಿಗಳನ್ನು ಯಾವ ಮಾಧ್ಯಮಗಳೂ ನೆನಪಿಸಿಕೊಳ್ಳುವುದಿಲ್ಲ ನೋಡಿ:

1 min read
saakshatv

ಜನನಾಯಕರ ಆಪ್ತ ಸಹಾಯಕರು ಎಂಬ ಅತ್ಯಾಪ್ತ ನಂಬಿಕಸ್ತರು, ವರ್ಕ್‌ ಮೆಷಿನ್‌ಗಳು,
ತ್ಯಾಗಮೂರ್ತಿಗಳನ್ನು ಯಾವ ಮಾಧ್ಯಮಗಳೂ ನೆನಪಿಸಿಕೊಳ್ಳುವುದಿಲ್ಲ ನೋಡಿ:

saakshatv ಈ ಮಂತ್ರಿ ಮಹೋದಯರಿಗೆ ಹೆಂಡ್ತಿ ಮಕ್ಕಳು ಆಪ್ತರಾಗಿ ಜತೆಯಲ್ಲಿ ಇರ್ತಾರೋ ಬಿಡ್ತಾರೋ ಆದರೆ ಆಪ್ತ ಸಹಾಯಕರು ಮಾತ್ರ ಕಡ್ಡಾಯ ಇರಲೇಬೇಕು. ತಾಳಿಯೊಂದು ಕಟ್ಟಿಸಿಕೊಳ್ಳದ ಆದರೆ ಹೆಂಡತಿಗಿಂತ ಹೆಚ್ಚು ನಂಬಿಗಸ್ತರಾದ ಈ ಆಪ್ತ ಸಹಾಯಕರು ಅತ್ಯಂತ ತಾಳ್ಮೆಯ ಸಹನಾಜೀವಿಗಳು.
ವಿಧಾನಸೌಧದ ಕಡತಗಳ ನೆನಪಿನ ಕೀಲಿ ಕೈಗಳಿವರು. ಇವರಿಲ್ಲದೇ ಮಂತ್ರಿಗಳ ಮಾವಿನಕಾಯಿ ಉದುರುವುದಿಲ್ಲ. ದೂರವಾಣಿ ಕಲರವ ನಿಲ್ಲುವುದಿಲ್ಲ. ಪೆನ್ನಿನ ಕ್ಯಾಪು ಒಪನ್ ಆಗೋಲ್ಲ; ಫೈಲುಗಳು ಚಲಿಸುವುದಿಲ್ಲ. ಕಛೇರಿ ಸಹಾಯಕರು ಹತ್ತಾರು ಮಂದಿ ಇದ್ದರೂ ಆಪ್ತರು ಒಬ್ಬರೋ ಇಬ್ಬರೋ ಮಾತ್ರ. ಎಲ್ಲಾ ಕೆಲಸಕ್ಕೂ ಅವರೇ ಹೆಣಗಬೇಕು, ಏಗಬೇಕು, ಶ್ರಮಿಸಬೇಕು, ದುಡಿದು ಬಳಿದು ಸಾಯಬೇಕು.!

ದೇವೇಗೌಡರ ಕುಟುಂಬದ ವರ್ಕೋಹಾಲಿಕ್ ಸಕ್ಸಸ್‌ಗೆ ಕಾರಣರಾದ ಆಪ್ತಸಹಾಯಕ ತಿಪ್ಪೇಸ್ವಾಮಿ ಮೇಲ್ಮನೆ ಸದಸ್ಯರಾಗಿದ್ದಾರೆ. ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಯಾನೆ ವೈಎಸ್‌ವಿ ದತ್ತಾ ಮೇಸ್ಟ್ರು ಕಡೂರಿನ ಯಶಸ್ವಿ ಶಾಸಕರಾದರು. ಸಿದ್ದರಾಮಣ್ಣಂಗೆ ಚಿನ್ನಪ್ಪ, ಗಣೇಶ, ವೆಂಕಟೇಶ, ವಿಜಯಕುಮಾರ್, ಈಗ ದ್ವೇಷ ಕಟ್ಟಿಕೊಂಡಿರುವ ಅಣ್ಣೇಚಾಕನಹಳ್ಳಿ ಪುಟ್ಸಾಮಿ ಆಪ್ತ ಸಹಾಯಕರಿದ್ದರು. ಕುಮಾರಣ್ಣಂಗೆ ಸತೀಶ, ರಘು.. ಮಲ್ಲಿಕಾರ್ಜುನ ಖರ್ಗೆಯವರಿಗೆ ಪಿಎ ಶಿವಣ್ಣ, ಬೊಮ್ಮಾಯಿಯವರಿಗೆ ಮೋಹನ್, ಬಂಗಾರಪ್ಪಂಗೆ ಶ್ರೀಧರ, ತುಕ್ಕೋಜಿ ಆಪ್ತ ಸಹಾಯಕರಾಗಿ ಹಗಲಿರುಳು ದುಡಿದರು. ಜೆ.ಹೆಚ್‌ ಪಟೇಲರಿಗೆ ಶಂಕರಲಿಂಗಪ್ಪ, ಹಾಗೂ ಫೇಮಸ್ ಗನ್ ಮನ್ ತಿಮ್ಮೇಗೌಡ ಆಪ್ತರಾಗಿದ್ದರೇ, ನಾಗೇಗೌಡರ ಯಶವಂತ್, ದೇವಿಶೆಟ್ಟಿಗೌಡ್ರು, ಮಂಡ್ಯದ ಶರ್ಮಾ, ಗೊವಿಂದೇಗೌಡರಿಗೆ ಮಂಜುನಾಥ್, ರಮಾನಾಥ ರೈಗೆ ಇಬ್ರಾಹಿಮ್ ಗೂನಡ್ಕ, ಈಶ್ವರಪ್ಪಗೆ ಕರೆಂಟ್ ಮಂಜು ಹಾಗೂ ಅಡಗೂರು ವಿಶ್ವನಾಥ್‌ರೊಂದಿಗೆ ಬರೋಬ್ಬರಿ ನಲ್ವತ್ತು ವರ್ಷ ಸವೆಸಿರುವ
ನಟರಾಜ್ ಜವಾಬ್ದಾರಿಯುತ ಆಪ್ತ ಸಿಬ್ಬಂದಿಗಳು.

ದಿವಂಗತ ಜಾರ್ಜ್ ಫರ್ನಾಂಡಿಸ್‌ಗೆ ಅನಿಲ್ ಹೆಗಡೆ ಮತ್ತು ದಿವಂಗತ ರಾಮಕೃಷ್ಣ ಹೆಗಡೆಗೆ ರಾಮಪ್ಪ ಎಂಬ ಅತ್ಯಾಪ್ತ ಸಿಬ್ಬಂದಿಗಳಿದ್ದರು. ಮಾಜಿ ಸಿಎಂ ಎಸ್.ಎಂ ಕೃಷ್ಣರಿಗೆ ಶಿವಣ್ಣ ಹಾಗೂ ಎಲ್ಲೋ ಪೇಜಸ್ ಶಾಸ್ತ್ರೀ ಎಂಬ ನಂಬಿಕಸ್ತರಿದ್ದರೇ, ಇಲ್ಲಿಂದ ಹೆಚ್.ಕೆ ಪಾಟೀಲರನ್ನು ಹಾದು ಡಿಕೆಶಿಗೆ ಆಪ್ತರಾಗಿ ಇಡಿ ತನಿಖೆ ಎದುರಿಸಿದ ಶ್ರೀಧರ್ ಮತ್ತು ಶಿವಶಂಕರ್, ಪಿ.ಜಿ.ಆರಚ್‌ ಸಿಂಧ್ಯಾರಿಗೆ ಗಾಯಕ್ವಾಡ್ ಮತ್ತು ಲಕ್ಮೀಶ, ಎಂ.ಪಿ ಪ್ರಕಾಶ್‌ರಿಗೆ ಹನುಮಂತು, ಸಗೀರ್ ಅಹ್ಮದ್‌ಗೆ ಮುಸ್ತಫಾ ಬೇಗ್, ನಫೀಜಾ ಫಜಲ್ ಹಾಗೂ ಖೇಣಿ ಬಳಿ ಇರುವ ನಾಗರಾಜ್ ಮತ್ತು ಹಾರ್ನಳ್ಳಿ ಪಿಎಗಳಾಗಿ ದುಡಿದರು.

ಜಾರ್ಜ್, ಅವರಿಂದ ಯಲಹಂಕ ವಿಶ್ವನಾಥ್‌ವರೆಗೆ ದುಡದು ಆಪ್ತ ಸಹಾಯಕ ಸತ್ಯನಾರಾಯಣ್. ಬಚ್ಚೇಗೌಡರಿಗೆ ಶ್ರೀನಿವಾಸಲು, ದಿವಂಗತ ಅನಂತ್ ಕುಮಾರ್‌ ಅವರಿಗೆ ಶ್ರೀನಿವಾಸ್‌ (ಈಗ ಗೋವಿಂದ ಕಾರಜೋಳ ಅವರ ಆಪ್ತ ಸಹಾಯಕರಾಗಿದ್ದಾರೆ) ಮತ್ತು ನಾರಾಯಣ್‌ ಗಂಭೀರ್, ಮನೋರಮ ಮದ್ವರಾಜ್ ಬಳಿ ಗಮಕಿ ಪ್ರಸನ್ನ, ಧರ್ಮಸಿಂಗ್ ಹತ್ತಿರ ಹನುಮಂತರಾವು ಪ್ರಸಾದೂ ಮೂಗನೂರು  ಸ್ವಾಮಿ, ಯಡೂರಪ್ಪನೋರಿಗೆ ಕುಂಕುಮಬೊಟ್ಟು ಸ್ವಾಮಿ ನಿಷ್ಟೆಯಿಂದ ದುಡಿದರು. ದೇಶಪಾಂಡೆ ಕಛೇರಿಯಲ್ಲಿ ಡಿಸೋಜಾ ಆಪ್ತ ಕಾರ್ಯದರ್ಶಿಯಾಗಿ ಟೈಪಿಸ್ಟ್‌ ಕೆಲಸವನ್ನೂ ಮಾಡುತ್ತಿದ್ದರು. ಈಗ
ರಿಟೈರ್ಡ್ ಆಗಿರುವ ಸಚ್ಚಿದಾನಂದಮೂರ್ತಿ, ಬಾಲು ಬಾಪುಗೌಡ್ರಿದ್ದರು. ಬಸವಲಿಂಗಪ್ಪನವರಿಗೆ ಶ್ರೀವತ್ಸ, ಚಂದ್ರೇಗೌಡರ ರಾಮಪ್ರಿಯ ಹಾಗೂ ಈಗಲೂ ಬಿಟ್ಟಿರದ ಶ್ರೀನಾಥ್ ಶೇಖರ್‌ಗಳು ಹತ್ತಿರದ ಪಿಎಗಳು.

ಇಷ್ಟೇ ಅಲ್ಲ ಜೀವರಾಜ್ ಆಳ್ವ ಹಾಗೂ ಶ್ರೀನಿವಾಸ್ ಪ್ರಸಾದ್ ಅವರಿಗೆ ರಘೂ ಎಂಬ ನೀಯತ್ತಿನ ಆಪ್ತ ಸಹಾಯಕರಿದ್ದರು, ಹಾಗೆಯೇ ಜನತಾದಳ ಕಛೇರಿಯ ಬೋರ್ಕರ್, ದೇವರಾಜ್, ಸೋಮು ಎಂಬುವವರು ಕೆಲಸ ಮಾಡಿದ್ದರು. ಬಿಜೆಪಿಯ ಗಡ್ಡ ಶ್ರೀಧರ್, ಕಾಂಗ್ರೆಸ್ ಕಚೇರಿಯಿಂದ ಪರಮೇಶ್ವರ್‌ಗೆ ತಗಲಿಕೊಂಡ ಆತ್ಮಾಹುತಿ ರಮೇಶ ಇವರನ್ನೂ ಇಲ್ಲಿ ನೆನಸಿಕೊಳ್ಳಲೇಬೇಕು. ಆದರೆ ಆಪ್ತ ಸಹಾಯಕರಿಗೆ ಅಂಟಿಕೊಳ್ಳದೇ ತಮ್ಮ ಭಾಷಣವನ್ನು, ಕಾರ್ಯಕ್ರಮದ ಪಟ್ಟಿಯನ್ನು ತಾವೇ ತಯಾರಿಸಿ ಕಿಸೆಯಲ್ಲಿಟ್ಟುಕೊಳ್ಳುವ ಯಡಿಯೂರಪ್ಪ, ರಾಮಲಿಂಗಾರೆಡ್ಡಿ, ಸುರೇಶ್ ಕುಮಾರ್ ಮುಂತಾದವರು ಕೆಲವರಿದ್ದಾರೆ.

ರಾಜಕೀಯ ಪಡಸಾಲೆಯಲ್ಲಿ ಪತ್ರಿಕೋದ್ಯಮದ ಕೊಡುಗೆಗಳೂ ಇವೆ. ಹರಿಶ್ಚಂದ್ರಭಟ್,
ಶೇಷಚಂದ್ರಿಕಾ. ಎಂ.ಎನ್ ವಿಜಯೇಂದ್ರ, ವಿಶ್ವೇಶ್ವರ ಭಟ್, ಹೆಚ್ ಬಿ ದಿನೇಶ್, ರಾಜು ಅಡಕಳ್ಳಿ, ಸದಾನಂದ, ಅಮೀನ್ ಮಟ್ಟು, ಕೆ.ವಿ ಪ್ರಭಾಕರ್, ಪಿ. ತ್ಯಾಗರಾಜ್, ಮುಂತಾದವರು ಕೆಲವು ಕಾಲದಿಂದಲೂ ನಂಬಿಕಸ್ತರಾಗಿ ಕೆಲಸ ಮಾಡಿದ್ದಾರೆ. ಈಗಲೂ ನಾಗಮಂಗಲದ ಪ್ರಕಾಶ್‌, ಚೇತನ್‌ ಮುಂತಾದವರು ಆಪ್ತ ಸಲಹಾಗಾರರಾಗಿ ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಲವಾರು ಕೋಟ್ಯಾಧೀಶ ಆಪ್ತ ಸಹಾಯಕರುಗಳು ಅಬ್ಬೇಪಾರಿಗಳಾಗಿ ಬೀದಿಗೆ ಬಿದ್ದವರಿದ್ದಾರೆ. ಶಾಸಕರು ಮಂತ್ರಿಗಳ ರಹಸ್ಯ ಕಾರ್ಯಾಚರಣೆಗಳು, ವೈಯುಕ್ತಿಕ ತೆವಲುಗಳಲ್ಲಿ ಇನ್ವಾಲ್ವ್ ಆದ ಆಪ್ತಸಹಾಯಕರು, ಗನ್ ಮನ್‌ಳು ಇದ್ದಾರೆ. ತಮ್ಮ ಪಾಡಿಗೆ ಹತ್ತೂವರೆ ಐದೂವರೆ ಕಾಯಕ ಮುಗಿಸಿ ಎದ್ದು ಹೊರಡುವವರೂ ಇದ್ದಾರೆ. ಪಿಎ ರಮೇಶ್ ಎಂಬ ಆಪ್ತ ಸಹಾಯಕನಂತೆಯೇ ಎಷ್ಟೋ ಸಹಾಯಕರು, ಈ ನಾಯಕರ ಕುಟುಂಬದವರ ಕೆಲವು ಸೀಕ್ರೇಟ್ ಕಾರಣಗಳಿಗೆ ಜೀವ ಕಳೆದುಕೊಂಡ ಮ್ಯಾಟರ್‌ಗಳು ಮಣ್ಣಾಗಿ ಹೋಗಿವೆ. ಮಂತ್ರಿಗಳ ಆಂಟೀ ಚೇಂಬರ್‌ಗಳಲ್ಲಿ ಕೇವಲ ಕಡತಗಳು ಮಾತ್ರ ಚಲಿಸುವುದಿಲ್ಲ ಎಂಬ ವಿಚಾರಗಳು ಬಹುತೇಕ ಆಪ್ತ ಸಹಾಯಕರಿಗೆ ಗೊತ್ತಿರುತ್ತದೆ. ವಿಧಾನಸೌಧ,
ರಾಜಕಾರಣದ ಇತಿಹಾಸ, ಸದನದ ಕಡತಗಳಲ್ಲಿ ಕೇವಲ ನಾಯಕರ ಹೆಸರುಗಳು ಮಾತ್ರ ಉಳಿಯುತ್ತವೆ.

ಆದರೆ ಈ ನಾಯಕರಿಗಾಗಿ ಹಗಲು ರಾತ್ರಿ ಎನ್ನದೆ ಅವಿರತವಾಗಿ ದುಡಿಯುವ ವರ್ಕೋಹಾಲಿಕ್‌ಗಳ ಹೆಸರು ಯಾರಿಗೂ ನೆನಪಿರುವುದಿಲ್ಲ, ಯಾರಿಗೂ ಬೇಡ, ಯಾವ ಮಾಧ್ಯಮಗಳು ಇವರ ಬಗ್ಗೆ ಬರೆಯುವುದೂ ಇಲ್ಲ. ಇದಲ್ಲವೇ ದುರಂತ..

ಕೃಪೆ – ಹಿಂದವೀ ಸ್ವರಾಜ್ಯ

ವೈ.ಜಿ ಅಶೋಕ್ ಕುಮಾರ್, ಹಿರಿಯ ಪತ್ರಕರ್ತರು, ಬೆಂಗಳೂರು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd