ಕೋವಿಡ್ ನಿಯಂತ್ರಣ ಮಾಡಲೇಬೇಕಿದ್ದ ಸಮಯದಲ್ಲಿ ಹಬ್ಬ, ಜಾತ್ರೆ ರ್ಯಾಲಿ ಮಾಡಿದ ಹೊಣೆಗೇಡಿ ಸರ್ಕಾರಗಳಿಂದಲೇ ಅಮಾಯಕ ಪ್ರಜೆಗಳ ಸಾಮೂಹಿಕ ಕಗ್ಗೊಲೆ

1 min read
Covid victims bodies

ಕೋವಿಡ್ ನಿಯಂತ್ರಣ ಮಾಡಲೇಬೇಕಿದ್ದ ಸಮಯದಲ್ಲಿ ಹಬ್ಬ, ಜಾತ್ರೆ ರ್ಯಾಲಿ ಮಾಡಿದ ಹೊಣೆಗೇಡಿ ಸರ್ಕಾರಗಳಿಂದಲೇ ಅಮಾಯಕ ಪ್ರಜೆಗಳ ಸಾಮೂಹಿಕ ಕಗ್ಗೊಲೆ ನಡೆಯಿತು: Marjala manthana Covid control

“ಭಾರತ ಕೋವಿಡ್ ಸಂಗ್ರಾಮದಲ್ಲಿ ಗೆದ್ದೇ ಬಿಟ್ಟಿತು ಎಂದು ಮೀಸೆ ತಿರುವಿದ ಸಮಸ್ತರ ಗಮನಕ್ಕೆ ಒಂದಷ್ಟು ಅಂಕಿ ಅಂಶ ಮಾಹಿತಿ ಸಹಿತ ಲೇಖನ; ಹಗಲೂ ರಾತ್ರಿ ಭಜನೆ ಮಾಡುವ ನಡುವೆ ಕೊಂಚ ಬಿಡುವು ಮಾಡಿಕೊಂಡು ಇದನ್ನು ದಯವಿಟ್ಟು ಓದಿ” Marjala manthana Covid control
Covid positive

ಕೋವಿಡ್‌ ಮೊದಲನೇ ಅಲೆಯು ಕಳೆದ ಜನವರಿ ಸಮಯದಲ್ಲೇ ಸಾಕಷ್ಟು ನಿಯಂತ್ರಣಕ್ಕೆ ಬಂದಿತ್ತಾದರೂ ಪೂರ್ತಿ ಮುಗಿದಿರಲಿಲ್ಲ. ಆಗ ಅದರ ಪೂರ್ಣ ನಿರ್ಮೂಲನೆಗೆ ಸಾಕಷ್ಟು ಎಚ್ಚರ ವಹಿಸಬೇಕಿತ್ತು. ಭಾರತಕ್ಕೆ ಕೋವಿಡ್ ಎರಡನೇ ಅಲೆಯ ದಾಳಿ ಸಾಧ್ಯತೆ ಇದೆ. ಏಪ್ರಿಲ್ ಮೇ ವೇಳೆಗೆ ಇದು ವಿಕೋಪಕ್ಕೆ ಹೋಗಲಿದೆ ಎಂದು ಪದೇ ಪದೇ ತಜ್ಞರು ಎಚ್ಚರಿಸಿದರೂ ನಮ್ಮ ಸರ್ಕಾರಗಳು ಅಲಕ್ಷಿಸಿದವು. ಸರ್ಕಾರವೇ ಮುಂದೆ ನಿಂತು ಹಬ್ಬ, ಜಾತ್ರೆ, ಮಹಾಕುಂಭ ಮತ್ತು ಸರಣಿ ಚುನಾವಣಾ ರ್ಯಾಲಿಗಳನ್ನು ನಡೆಸಿತಲ್ಲ ಅದರ ಪರಿಣಾಮವನ್ನೇ ಇಂದು ನಾವು ಅನುಭವಿಸುತ್ತಿರುವುದು. ಹೊಣೆಗೇಡಿ ದರಿದ್ರ ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಪ್ರಜೆಗಳ ಸಾಮೂಹಿಕ ಮಾರಣಹೋಮ ನಡೆಯುತ್ತಿದೆ.

ದೆಹಲಿಯಲ್ಲಿ ಮಾರ್ಚ್ ಶುರುವಿನ ತನಕವೂ ಪ್ರತಿನಿತ್ಯ 200 ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದವು. ಮಾರ್ಚ್ 1ರ ವೇಳೆಯಲ್ಲಿ 1,404 ಸಕ್ರಿಯ ಪ್ರಕರಣಗಳಿದ್ದವು. ಆದರೆ ಮಾರ್ಚ್ 18ರ ನಂತರ ದೆಹಲಿ ಬೀದಿಗಳು ಹೋಳಿ ಹಬ್ಬದ ಬಣ್ಣದೋಕುಳಿಯಿಂದ ರಂಗೇರಿತು. ಅದರ ಪರಿಣಾಮ ಈಗ ಪ್ರತಿನಿತ್ಯ ದೆಹಲಿಯಲ್ಲಿ 20 ಸಾವಿರ ಪ್ರಕರಣ ವರದಿಯಾಗುತ್ತಿದೆ. ದೆಹಲಿಯ ಬೀದಿ ಬೀದಿಗಳಲ್ಲಿ ಮೂಗಿಗೆ ಆಕ್ಸಿಜನ್ ಹಾಕಿಕೊಂಡು ಮಲಗಿರುವ ರೋಗಿಗಳು ಕಂಡು ಬರುತ್ತಿದ್ದಾರೆ.

ಕೇರಳದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದಾಗ ಕೋವಿಡ್ ಕಂಪ್ಲೀಟ್ ಕಂಟ್ರೋಲ್ ನಲ್ಲಿತ್ತು. ಈಗ ನಿತ್ಯ ಸರಾಸರಿ 22 ಸಾವಿರ ಕೋವಿಡ್ ಪ್ರಕರಣಗಳು. ಕೇರಳವನ್ನು ಪ್ರತಿಷ್ಟೆಯಾಗಿ ಸ್ವೀಕರಿಸಿದ ಬಿಜೆಪಿ, ಕಾಂಗ್ರೆಸ್ ಮತ್ತು ಲೆಫ್ಟ್ ಪಾರ್ಟಿಗಳ ಚುನಾವಣಾ ಪ್ರಚಾರ ಇದಕ್ಕೆ ನೇರ ಕಾರಣ. ಏಪ್ರಿಲ್ 26 ರಂದು ಕೇರಳದಂತ ಸಣ್ಣ ರಾಜ್ಯದಲ್ಲಿ ವರದಿಯಾದ ಸಕ್ರಿಯ ಕೋವಿಡ್ ಪ್ರಕರಣ 2.32 ಲಕ್ಷ.

ಪುದುಚೇರಿಯಲ್ಲಿಯೂ ಕೋವಿಡ್ ಎರಡನೇ ಅಲೆಯ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ಚುನಾವಣೆಯ ಕಾರಣಕ್ಕೆ. ಇಲ್ಲಿ ಅತಿ ಹೆಚ್ಚು ಚುನಾವಣಾ ಸಭೆ ನಡೆಸಿದ್ದು ಬಿಜೆಪಿ ಮತ್ತು ಎಐಡಿಎಂಕೆ. ಏಪ್ರಿಲ್ 26ರ ವೇಳೆಗೆ 7750 ಸಕ್ರಿಯ ಪ್ರಕರಣ ಪುದುಚೆರಿಯಲ್ಲಿ ವರದಿಯಾಗಿದೆ.

ತಮಿಳುನಾಡು ಸಹ ಎಐಎಡಿಎಂಕೆ, ಡಿಎಂಕೆ, ಕಾಂಗ್ರೆಸ್‌, ಕಮಲ್ ಹಾಸನ್ ಪಕ್ಷಗಳ ನಿರಂತರ ಬೃಹತ್ ಜನಸಂಪರ್ಕ ರ್ಯಾಲಿಗಳ ಕಾರಣ ಕೋವಿಡ್ ದಾಳಿಗೆ ತುತ್ತಾಗಿದೆ. ಇಲ್ಲಿಯೂ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಭರ್ಜರಿ ಪ್ರಚಾರ ಸಭೆ ನಡೆಸಿ ಕೋವಿಡ್ ಬಿತ್ತನೆ ಮಾಡಿದ್ದಾರೆ. ಫೆಬ್ರವರಿಯಲ್ಲಿ 4 ಸಾವಿರದಷ್ಟಿದ್ದ ಪ್ರಕರಣ ಏಪ್ರಿಲ್ ಅಂತ್ಯದ ವೇಳೆಗೆ 1.07 ಲಕ್ಷದಷ್ಟಾಗಿದೆ.

Election rally

ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಎರಡನೆಯ ಅಲೆಯ ಪರಾಕಾಷ್ಟೆಗೆ ನೇರ ಕಾರಣ ಪ್ರಧಾನಿಗಳ, ಕೇಂದ್ರ ಗೃಹಸಚಿವರ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್, ಮಮತಾ ದೀದಿ ಮತ್ತು ರಾಹುಲ್ ರ ಬಹಿರಂಗ ಪ್ರಚಾರ ಸಭೆಗಳು. ಫೆಬ್ರವರಿಯಲ್ಲಿ ಕೇವಲ 180 ನಿತ್ಯ ವರದಿಯಾಗುತ್ತಿದ್ದ ಕೋವಿಡ್ ಸಕ್ರಿಯ ಪ್ರಕರಣಗಳನ್ನು ಈಗ 15 ಸಾವಿರಕ್ಕೆ ಹೆಚ್ಚಳವಾಗಿದೆ ಇದರ ಸಂಪೂರ್ಣ ಶ್ರೇಯ ಈ ರಾಜಕೀಯ ಪಕ್ಷಗಳಿಗೆ ಸಲ್ಲಬೇಕು. ಬಿಜೆಪಿ ಮತ್ತು ಟಿಎಂಸಿ ಪ್ರತಿದಿನ 8 ಪ್ರಚಾರ ರ್ಯಾಲಿ ಮಾಡಿದೆ. ಬಿಜೆಪಿ 300 ಬಹಿರಂಗ ಪ್ರಚಾರ ಸಭೆ ಮತ್ತು 160 ರೋಡ್ ಶೋ ನಡೆಸಿದರೇ, ತೃಣಮೂಲ ಕಾಂಗ್ರೆಸ್ ಸಹ 180 ರ್ಯಾಲಿಗಳನ್ನು ನಡೆಸಿದೆ. ಏಪ್ರಿಲ್ 26ರಂದು 94 ಸಾವಿರ ಚಿಲ್ಲರೆ ಸಕ್ರಿಯ ಕೋವಿಡ್ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಅಘಾಡಿ ಘಟಬಂದನ್ ಸರ್ಕಾರ ಮಾರ್ಚ್ ಕೊನೆಯ ವಾರ ಹೋಳಿ ಆಚರಣೆಗೆ ಅವಕಾಶ ಮಾಡಿಕೊಟ್ಟಿತು. ಕಳೆದ ವರ್ಷಾಂತ್ಯದಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು ಕೋವಿಡ್. ಈಗ ರಾಜ್ಯದಲ್ಲಿ ಪ್ರತಿದಿನ 55,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಮಾರ್ಚ್ 2ರಿಂದ ಏಪ್ರಿಲ್ 26ರ ವರೆಗೆ ಬರೋಬ್ಬರಿ 22 ಲಕ್ಷ ಸಕ್ರಿಯ ಕೋವಿಡ್ ಪ್ರಕರಣ ವರದಿಯಾಗಿದೆ.

ಉತ್ತರಾಖಂಡದ ವಿಚಾರದಲ್ಲಿ ಹೆಚ್ಚೇನು ಹೇಳಬೇಕಾಗಿಯೇ ಇಲ್ಲ. ಖುದ್ದು ಪ್ರಧಾನಿಗಳೇ ಮಹಾಕುಂಭಕ್ಕೆ ಸ್ವಾಗತ ಎಂದು ಟ್ವೀಟಿಸಿ ಕುಂಬಮೇಳ ನಡೆಸಲು ಅನುವು ಮಾಡಿಕೊಟ್ಟರು. ಸ್ವತಃ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಕುಂಭಸ್ನಾನ ಮಾಡಿದರು. ಪರಿಣಾಮ 2021ರ ಜನವರಿ 15ರವರೆಗೆ 94 ಸಾವಿರ ಕೋವಿಡ್‌ ಪ್ರಕರಣಗಳು ಈಗ ಲೆಕ್ಕ ಹಾಕಿ ಪ್ರಯೋಜನವಿಲ್ಲ. ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ 2000 ಸಾಧುಗಳಿಗೆ ಕೋವಿಡ್ ದೃಢವಾಯ್ತು. ಈಗ 39 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಅಲ್ಲಿ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕೋವಿಡ್ ಹೆಚ್ಚಳಕ್ಕೆ ಕಾರಣ ರೈತ ಹೋರಾಟ. ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಾವಿರಾರು ರೈತರು ತಂಡೋಪ ತಂಡವಾಗಿ ವಾಪಾಸು ತಮ್ಮೂರಿಗೆ ತೆರಳುವಾಗ ಕೋವಿಡ್ ಗಿಫ್ಟ್ ಹಿಡಿದುಕೊಂಡೇ ಹೋದರು. ಪಂಜಾಬ್‌ನಲ್ಲಿ ಮಾರ್ಚ್‌ 1ರ ಹೊತ್ತಿಗೆ 1.80 ಲಕ್ಷ ಇದ್ದ ಪ್ರಕರಣಗಳು ಏಪ್ರಿಲ್ 26ರಂದು 3.45 ಲಕ್ಷ ಮುಟ್ಟಿದೆ.

Marjala manthana farmers protest

ಗುಜರಾತ್‌ ನ ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಉದ್ಘಾಟನೆಯಾಯ್ತು. ಹಿಂದೆಯೇ ಇಂಡೋ ಇಂಗ್ಲೆಂಡ್ ಟಿ-20 ಸರಣಿ ನಡೆಯಿತು. ಸಾವಿರಾರು ಜನ ಗ್ಯಾಲರಿಯಲ್ಲಿ ಸಾಮಾಜಿಕ ಅಂತರ ಪಾಲಿಸದೇ ತುಂಬಿ ತುಳುಕಿದರು. ನಂತರ ಕೆಲವು ಮ್ಯಾಚ್ ಗಳಿಗೆ ವೀಕ್ಷಕರನ್ನು ನಿರ್ಬಂಧಿಸಲಾಯಿತಾದರೂ ಆ ವೇಳೆಗೆ ಪರಿಸ್ಥಿತಿ ಕೈಮೀರಿತ್ತು. ಅದರ ಪರಿಣಾಮದಿಂದಲೇ ಕೋವಿಡ್ ಪೀಡಿತರ ಸಂಖ್ಯೆ 3 ಲಕ್ಷ ಮುಟ್ಟಿದೆ. ಮೋದಿಯವರ ತವರು ಗುಜರಾತ್ ನಲ್ಲಿ ಮಾರ್ಚ್ 1ರ ಹೊತ್ತಿಗೆ 2400 ಚಿಲ್ಲರೇ ಇದ್ದ ಸಕ್ರಿಯ ಪ್ರಕರಣಗಳ ಈಗ 1.26 ಲಕ್ಷದಷ್ಟಾಗಿದೆ.

ಇನ್ನು ಉತ್ತರ ಪ್ರದೇಶದ ವಿಚಾರಕ್ಕೆ ಬಂದರೆ ಇಲ್ಲೂ ಕೋವಿಡ್ ರುದ್ರತಾಂಡವಕ್ಕೆ ಕಾರಣ ಸಾರ್ವತ್ರಿಕ ಗ್ರಾಮ ಪಂಚಾಯತ್ ಚುನಾವಣೆ. ಚುನಾವಣಾ ಕರ್ತವ್ಯ ನಿರತ ಹಲವು ಶಿಕ್ಷಕರಿಗೆ ಸೋಂಕು ತಗುಲಿದ್ದ ಕಾರಣ ಚುನಾವಣೆ ಮುಂದೂಡುವಂತೆ ಶಿಕ್ಷಕರ ಸಂಘ ಮನವಿ ಮಾಡಿತ್ತು ಆದರೂ ಚುನಾವಣೆ ನಡೆಯಿತು. ಸದ್ಯ ಚುನಾವಣಾ ಆಯೋಗಕ್ಕೆ ಶಿಕ್ಷಕರ ಸಂಘ ನೀಡಿರುವ ಮಾಹಿತಿಯಂತೆ, ಚುನಾವಣಾ ಕರ್ತವ್ಯದಲ್ಲಿ ಹಾಜರಾಗಿದ್ದ ಸುಮಾರು 557 ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಮೂರು ಹಂತದ ಗ್ರಾಮ ಪಂಚಾಯತ್ ಚುನಾವಣೆಯ ನಂತರ ಸಕ್ರಿಯ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ.

Covid 19 second wave

ಈ ಎಲ್ಲಾ ರಾಜ್ಯಗಳ ವಿದ್ಯಮಾನ ಗಮನಿಸಿ ನೋಡಿ. ಬಹುತೇಕ ಕಡೆ ಕೋವಿಡ್ ಮಹಾಮಾರಿ ವ್ಯಾಪಕವಾಗಿ ಹಬ್ಬಲು ಕಾರಣ ಎಲೆಕ್ಷನ್. ಹೀನ ರಾಜಕೀಯ ನಮ್ಮೆಲ್ಲರ ಸಾಮೂಹಿಕ ಕಗ್ಗೊಲೆ ಮಾಡಿದೆ. ಹಾಗಿದ್ದರೇ ತಾತ್ಕಾಲಿಕವಾಗಿ ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದಿತ್ತು. ಕೇಂದ್ರ ಮತ್ತು ರಾಜ್ಯಸರ್ಕಾರಗಳು ಹೇಗೆ ವರ್ತಿಸಬೇಕಿತ್ತು? ನಿರೀಕ್ಷಿಸಿ ಮುಂದಿನ ಲೇಖನದಲ್ಲಿ ಇದರ ಬಗ್ಗೆ ಪಾಸಿಬಲ್ ಆಲ್ಟ್ರನೇಟಿವ್ ವಿಧಾನಗಳ ಬಗ್ಗೆ ಬರೆಯಬೇಕೆಂದಿದ್ದೇನೆ.

-ವಿಭಾ
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd