ಇಸ್ಲಾಮಾಬಾದ್ : ನೆರೆಯ ಪಾಕಿಸ್ತಾನದಲ್ಲಿ ಮಿಡತೆಗಳ ಹಾವಳಿ ಹೆಚ್ಚಾಗಿದ್ದು, ಕೊರೊನಾದಷ್ಟೇ ಮಿಡತೆ ಕೂಡ ಪಾಕಿಸ್ಥಾನವನ್ನು ಭಾದಿಸುತ್ತಿದೆ. ಇನ್ನು ಈಗಾಗಲೇ ಕೊರೊನಾಗೆ ಪಾಕಿಸ್ತಾನ ತತ್ತರಿಸಿದ್ದು, ಅಲ್ಲಿನ ಸಂಸದರೊಬ್ಬರು ಕೊರೊನಾಗೆ ಮಿಡತೆ ಔಷಧಿ ಎಂದಿದ್ದಾರೆ.
ಹೌದು..! ಪಾಕಿಸ್ತಾನ ಸಂಸದ ರಿಯಾಜ್ ಫತ್ಯಾನ, ಮಿಡತೆ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಕೊರೊನಾ ವೈರಸ್ ಅನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.
ಈ ವಿಚಾರವನ್ನು ಸಂಸತ್ತಿನ ಕಲಾಪದ ವೇಳೆ ಪ್ರಸ್ತಾಪ ಮಾಡಿರುವ ರಿಯಾಜ್, ಮಿಡತೆಯನ್ನು ತಿನ್ನುವುದರಿಂದ ಮಾನವನ ದೇಹದಲ್ಲಿ ರೋಗನಿರೋಧಕ ಶಕ್ತಿ ನೀಡಬಲ್ಲ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ. ಆ ಸಮಯದಲ್ಲಿ ಮನುಷ್ಯನ ದೇಹದಲ್ಲಿ ಶಕ್ತಿ ಜಾಸ್ತಿಯಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಗೆ ಇದ್ದರೆ, ಕೊರೊನಾ ಸೋಂಕು ನಮಗೆ ಬರುವುದಿಲ್ಲ ಎಂದು ತನ್ನ ವಾದವನ್ನು ಮಂಡಿಸಿದ್ದಾರೆ.
ಇದರ ಜೊತೆಗೆ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಗೆ ಮಿಡತೆ ಬಗ್ಗೆ ಸಲಹೆಯೊಂದನ್ನು ನೀಡಿರುವ ರಿಯಾಜ್ ಫತ್ಯಾನ, ಮಿಡತೆ ತಿನ್ನುವುದರಿಂದ ಪಾಕಿಸ್ತಾನಕ್ಕೆ ಎರಡು ಲಾಭವಿದ್ದು, ಒಂದು ಕೊರೊನಾ ವಿರುದ್ಧ ಹೋರಾಟ ನಡೆಸಬಹುದು. ಎರಡನೇಯದು ಪ್ರತಿ ವರ್ಷ ಮಿಡತೆ ದಾಳಿ ನಮಗೆ ತೊಂದರೆ ಕೊಡುತ್ತಿದೆ. ಇದಕ್ಕೂ ಪರಿಹಾರ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಪಾಕ್ ಸಂಸತ್ತಿನಲ್ಲಿ ನಿಂತು ರಿಯಾಜ್ ಫತ್ಯಾನ, ಮಿಡತೆ ತಿನ್ನುವ ವಾದವನ್ನು ಮಂಡಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಭಾರತದಲ್ಲಿ ಬಹಳ ಟ್ರೋಲ್ ಆಗುತ್ತಿದೆ.