Cinema ಮಂದಿಗೆ ಗುಡ್ ನ್ಯೂಸ್ : ಥಿಯೇಟರ್ ಹೌಸ್ ಫುಲ್ ಗೆ ಗ್ರೀನ್ ಸಿಗ್ನಲ್
ಬೆಂಗಳೂರು : ಸಿನಿಮಾ ಮಂದಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್ ಮೇಲೆ ಹೇರಲಾಗಿದ್ದ ನಿಯಮವನ್ನು ಸರ್ಕಾರ ತೆಗೆದು ಹಾಕಿದೆ. ನಾಳೆಯಿಂದಲೇ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಹೋಟೆಲ್, ರೆಸ್ಟೋರೆಂಟ್ ಗಳ ಮೇಲಿನ ನಿರ್ಬಂಧ ತೆರೆವುಗೊಳಿಸಿ ಥಿಯೇಟರ್ ಗಳ ಮೇಲೆ ನಿರ್ಬಂಧ ಮುಂದುವರೆಸಿದ್ದಕ್ಕಾಗಿ ಸರ್ಕಾರದ ವಿರುದ್ಧ ಸಿನಿಮಾ ಮಂದಿ ಗರಂ ಆಗಿದ್ದರು. ಅಲ್ಲದೇ ನಿಯಮಗಳನ್ನು ಸಡಿಲಗೊಳಿಸುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೊರೊನಾ ಸಂಬಂಧ ಸಭೆ ನಡೆಯಿತು. ಈ ಸಭೆಯಲ್ಲಿ ಸಿನಿಮಾ, ಜಿಮ್ ಗಳ ಮೇಲಿದ್ದ ನಿಯಮಗಳನ್ನು ತೆಗೆದು ಹಾಕಲಾಗಿದೆ.
ಇನ್ನು ಹೌಸ್ ಫುಲ್ ಗೆ ಅನುಮತಿ ನೀಡಿರುವ ಸರ್ಕಾರ, ಚಲನಚಿತ್ರ ಮಂದಿರದೊಳಗೆ ಹೋಗುವವರು ಕಡ್ಡಾಯ ಮಾಸ್ಕ್ ಧರಿಸಬೇಕು, ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಿದೆ.
ಅಲ್ಲದೇ ತಿಂಡಿ ಪದಾರ್ಥಗಳನ್ನ ಥಿಯೇಟರ್ ಒಳಗೆ ತೆಗೆದುಕೊಂಡು ಹೋಗಲು ನಿಷೇಧ ಹೇರಲಾಗಿದೆ. ವಿರಾಮದ ಸಂದರ್ಭದಲ್ಲಿ ಹೊರಗೆ ಬಂದು ತಿನ್ನಬಹುದು. ಕಟ್ಟುನಿಟ್ಟಿನ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದೆ.
ಕೇವಲ ಸಿನಿಮಾ ಮಾತ್ರವಲ್ಲದೇ ಜಿಮ್, ಈಜುಕೊಳ, ಯೋಗ ಕೇಂದ್ರಗಳಿಗೂ 100% ಭರ್ತೀಗೆ ಅವಕಾಶ ನೀಡಲಾಗಿದೆ.