ಶಂಖ ಊದಲು ಜನ ಇಟ್ಟುಕೊಂಡಿದ್ದೀರಿ, ನೀವು ಶಂಖ ಊದಿಕೊಳ್ರಪ್ಪ : ಬಿಜೆಪಿಗೆ ಹೆಚ್ಡಿಕೆ ಟಾಂಗ್
ಮಂಡ್ಯ : ನೀವು ಶಂಖ ಊದಲು ಜನ ಇಟ್ಟುಕೊಂಡಿದ್ದೀರಿ. ನೀವು ಶಂಖ ಊದಿಕೊಳ್ರಪ್ಪ ಎಂದು ಸಚಿವ ಕೆ.ಎಸ್.ಈಶ್ವರಪ್ಪಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜನಸ್ವರಾಜ್ ಯಾತ್ರೆ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಜೆಡಿಎಸ್ ನಲ್ಲಿ ಶಂಖ ಊದಲೂ ಜನರಿಲ್ಲ ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಮಂಡ್ಯದಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ನಾವು ಶಂಖ ಊದಲು ಜನ ಕರೆದುಕೊಂಡು ಬರಬೇಕಿಲ್ಲ.
ಕೇವಲ ಶಂಖ ಊದುವುದರಿಂದ ಏನೂ ಆಗಲ್ಲ. ನೀವು ಶಂಖ ಊದಲು ಜನ ಇಟ್ಟುಕೊಂಡಿದ್ದೀರಿ. ನೀವು ಶಂಖ ಊದಿಕೊಳ್ರಪ್ಪ. ಆದರೆ ಈಗ ಶಂಖ ಊದುವ ಕಾಲ ಅಲ್ಲ, ಕೆಲಸ ಮಾಡಿ ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ ಬಕಾಸುರರ ರೀತಿ ನುಂಗೋದೇ ಅಭಿವೃದ್ಧಿಯಾ ಎಂದು ಪ್ರಶ್ನಿಸಿದ ಹೆಚ್ ಡಿಕೆ, ನೀವು ಮಾತ್ರ ಅಭಿವೃದ್ಧಿ ಮಾಡಿಕೊಂಡಿದ್ದೀರಿ ಅಷ್ಟೇ.
ನಿಮ್ಮ ಹಿಂದೆ ಝಂಡ ಹಿಡಿದು ಬರುವವರ ಅಭಿವೃದ್ಧಿ ಮಾಡಿದ್ದೀರಿ. ಆದರೆ ನಿಮ್ಮನ್ನ ಅಧಿಕಾರದಲ್ಲಿ ಕೂರಿಸಿದವರ ಅಭಿವೃದ್ಧಿ ಮಾಡಿದ್ದೀರ ಹೇಳಿ ಎಂದರು.
ಹಾಗೇ ನಾನು ಏನು ಅಭಿವೃದ್ಧಿ ಮಾಡಿದ್ದೀನಿ ಎಂಬುದಕ್ಕೆ ದಾಖಲೆ ಇಟ್ಟುಕೊಂಡಿದ್ದೇನೆ. ನೀವು ಏನು ಅಭಿವೃದ್ಧಿ ಮಾಡಿದ್ದೀರಿ ಜನರ ಮುಂದೆ ಹೇಳಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.