ಬೆಂಗಳೂರು: ನವ ವಿವಾಹಿತ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ರಾಜಗೋಪಾಲನಗರದಲ್ಲಿ ನಡೆದಿದೆ.
ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎನ್ನಲಾಗಿದೆ. ಮಗಳು ನೇಣಿಗೆ ಶರಣಾಗಲು ಪತಿಯ ಅಕ್ರಮ ಸಂಬಂಧವೇ ಕಾರಣ ಎಂದು ಯುವತಿಯ ಪೋಷಕರು ಆರೋಪಿಸಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ, ಅಳಿಯನನ್ನು ನಮಗೆ ಒಪ್ಪಿಸುವಂತೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಕಾವ್ಯ ಅವರ ವಿವಾಹವಾಗಿತ್ತು. ಈ ವೇಳೆ ಅರ್ಧ ಕೆಜಿ ಚಿನ್ನ ಕೊಟ್ಟು, 50 ಲಕ್ಷ ರೂ. ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚೆಗಷ್ಟೇ ಮೊಮ್ಮಗನ ಹುಟ್ಟು ಹಬ್ಬ ಕೂಡ ನಡೆದಿತ್ತು ಎಂದು ಮಹಿಳೆಯ ಕುಟುಂಬಸ್ಥರು ತಿಳಿಸಿದ್ದಾರೆ.
ಮೃತ ಕಾವ್ಯಳ ಪತಿ ಪ್ರವೀಣ್, ವೃತ್ತಿಯಲ್ಲಿ ಎಂಜಿನಿಯರ್ ಪೂರೈಸಿದ್ದ. ಆದರೆ, ಕೆಲಸಕ್ಕೆ ಹೋಗುತ್ತಿರಲಿಲ್ಲ. ಬೇರೆ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ಪ್ರಶ್ನಿಸಿದರೆ ತಂಗಿ ಎಂದು ಹೇಳಿದ್ದ ಎಂದು ಆರೋಪಿಸಿದ್ದಾರೆ. ಸದ್ಯ ಪತಿ, ಅತ್ತೆ, ಮಾವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಗೃಹಿಣಿಯ ಕುಟುಂಬಸ್ಥರು, ಯುವಕನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.