ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿವೆ. ಈ ಬಾರಿ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಿ ರಜೆ ಘೋಷಣೆ ಆಗಿದೆ. ಈ ಎರಡೂ ದಿನ ಖಾಸಗಿ ಕಂಪನಿಗಳು ಕೂಡ ರಜೆ ನೀಡಬೇಕು ಎಂದು ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನ್ ಸೂಚಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ಹಿನ್ನೆಲೆಯಲ್ಲಿ ಈಗಾಗಲೇ ಐಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಲಾಗಿದೆ. ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ಹೇಳಿದ್ದೇವೆ. ಸಾಧ್ಯವಾದರೆ ಮತಗಟ್ಟೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ. ವರ್ಕ್ ಫ್ರಮ್ ಹೋಮ್ ಮಾಡುವಂತೆ ಕಂಪನಿಗಳು ಸಿಬ್ಬಂದಿಗೆ ಹೇಳುವಂತಿಲ್ಲ. ಕಡ್ಡಾಯವಾಗಿ ರಜೆ ನೀಡಲೇಬೇಕು. ಒಂದು ವೇಳೆ ರಜೆ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಶೇ. 35 ಹಾಗೂ ಅದಕ್ಕಿಂತ ಕಡಿಮೆ ಇರುವ ಬಿಬಿಂಪಿ ವ್ಯಾಪ್ತಿಯ 1800 ಮತ್ತು ರಾಜ್ಯದ 5000 ಮತಗಟ್ಟೆಗಳನ್ನು ಗುರುತಿಸಿದ್ದೇವೆ. ಅಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಏಪ್ರಿಲ್ 26 ಶುಕ್ರವಾರ ಆಗಿದ್ದು, ಮೊದಲು ಮತದಾನ ಮಾಡಿ ನಂತರ ರಜೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.