ಜೀವ ಮಣ್ಣಿಗೆ ಹೋಗುವವರೆಗೂ ಮಂಡ್ಯ ಜಿಲ್ಲೆಗೆ ಬರ್ತೀನಿ : ಹೆಚ್.ಡಿ.ಕುಮಾರಸ್ವಾಮಿ hd-kumaraswamy
ಮಂಡ್ಯ : ಜೀವ ಮಣ್ಣಿಗೆ ಹೋಗುವವರೆಗೂ ಮಂಡ್ಯ ಜಿಲ್ಲೆಗೆ ಬರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಚೆಲುವನಾರಾಯಣಸ್ವಾಮಿ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು. ಹೌದು ನಾನು, ದೇವೇಗೌಡರು ಸಿಎಂ ಜೊತೆ ಮಾತನಾಡಿದ್ದೇವೆ. ನೀವು ಯಾವ ತನಿಖೆಯಾದರೂ ಮಾಡಿಕೊಳ್ಳಿ. ಹಗರಣ ಬಯಲಿಗೆಳೆದ ಆ ಡಳಿತ ಮಂಡಳಿ ವಿರುದ್ಧವೇ ಕ್ರಮ ಯಾಕೆ ಎಂದು ಸಿಎಂಗೆ ಹೇಳಿದ್ದೇವೆ.
ನನ್ನ ಬಡ್ಡಿ ಮಗ ಎನ್ನುತ್ತಾರಲ್ಲ, ಅವರು ನಮಗೆ ಬಡ್ಡಿ ಕೊಡುವುದಿರಲಿ ನಾನು ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ. ನಾನೇ ಸಿಎಂಗೆ ಹೇಳಿ ಟೈಂ ನಿಗದಿ ಮಾಡ್ತೀನಿ. ಈ ವಯಸ್ಸಿನಲ್ಲಿ ಮಾದೇಗೌಡರು ಯಾಕೆ ಆ ಮಾಹಾನುಭಾವನೇ ಕರೆದುಕೊಂಡು ಹೋಗಲಿ. ಹಗರಣ ಹೊರತಂದಿದ್ದೇ ಈ ಆಡಳಿತ ಮಂಡಳಿ. ಇವರಿಗೆ ಮಾನ ಮರ್ಯಾದೆ ಇದ್ದರೆ ಹಗರಣದ ತನಿಖೆ ನಡೆಸೋ ಬಗ್ಗೆ ಮಾತನಾಡಲಿ ಎಂದು ಸವಾಲ್ ಹಾಕಿದರು.
ಇನ್ನು ನಾನು ಇವರ ಅಪ್ಪಣೆ ತಗೊಂಡು ಮಂಡ್ಯಕ್ಕೆ ಬರಬೇಕಿಲ್ಲ. ನನ್ನ ಜನ ಬಡವರಿದ್ದಾರೆ, ಈ ಜಿಲ್ಲೆಯ ಜನ ಋಣ ಹೊರಿಸಿದ್ದಾರೆ. ನನಗೆ ಗೌರವ ಕೊಟ್ಟಿರುವ ಲಕ್ಷಾಂತರ ಜನ ಇಲ್ಲಿದ್ದಾರೆ. ಜೀವ ಮಣ್ಣಿಗೋಗೊವರೆಗೂ ಮಂಡ್ಯ ಜಿಲ್ಲೆಗೆ ಬರ್ತೀನಿ. ಮಾತನಾಡುವಾಗ ಎಚ್ಚರಿಕೆ ಇರಲಿ. ಏನ್ ಇವರ ಋಣ ತಿಂದಿದ್ದವಾ, ಹಲ್ಲು ಹಿಡಿದು ಮಾತನಾಡಲಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.