ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ : ಇಂದು ಆರೆಂಜ್, ನಾಳೆ ರೆಡ್ ಅಲರ್ಟ್
ಉಡುಪಿ : ಜಿಲ್ಲೆಯಲ್ಲಿ ಭಾರಿ ವರ್ಷಧಾರೆಯಿಂದ ನಾನಾ ಅವಾಂತರಗಳು ಸೃಷ್ಠಿಯಾಗುತ್ತಿವೆ. ಇನ್ನು ಕೆಲದಿನಗಳ ಕಾಲ ಮಳೆ ಮುಂದುವರೆಯುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್, ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಟ್ಟ ಮೋಡದ ಜೊತೆಗೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಡಲಿಗೆ ಇಳಿಯದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಮೀನುಗಾರಿಕೆ ನಡೆಸದಂತೆ ನಾಡದೋಣಿಗಳಿಗೆ ತಿಳಿಸಲಾಗಿದೆ.
ಇತ್ತ ಜಿಲ್ಲೆಯ ಕಾಪು ತಾಲೂಕಿನಲ್ಲಿ ಧಾರಕಾರ ಮಳೆಯಿಂದಾಗಿ ಕಟಪಾಡಿಯಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ. ಇದರಿಂದ ವಿದ್ಯುತ್ ಕಂಬ ಮತ್ತು ಮನೆಗೆ ಹಾನಿಯಾಗಿದೆ. ಅವಘಡದಲ್ಲಿ ಇಬ್ಬರಿಗೆ ಗಾಯಗಳಾಗಿದ್ದುಮ ಅವರಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇನ್ನು ಸ್ಥಳಕ್ಕೆ ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.