‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಗಟ್ಟಿ ಕಥೆ ಇರುವ ತಾಂತ್ರಿಕತೆಯ ಬಳಕೆ ಮಾಡಿಕೊಂಡಿರುವ ಮತ್ತು ವಿಭಿನ್ನ ನಿರೂಪಣೆಯ ಪ್ರಯೋಗಾತ್ಮಕ ಚಿತ್ರ. ತಮ್ಮ ಮೊದಲ ಚಿತ್ರದಲ್ಲಿಯೇ ನಿರ್ದೇಶಕ ಹೇಮಂತ್ ರಾವ್ ಅಚ್ಚರಿ ಮೂಡಿಸುವಂತೆ ಇಡೀ ಸಿನಿಮಾ ಕಟ್ಟಿಕೊಟ್ಟಿದ್ದರು. ಇದು ಥಿಯೇಟರ್ ಅಂಗಳದಲ್ಲೂ ಭಾರಿ ಸದ್ದು ಮಾಡಿತ್ತು. ಈ ಸಿನಿಮಾ ತಮಿಳಿಗೂ ಸಹ ರಿಮೇಕ್ ಆಗಿತ್ತು. ಚಿತ್ರದ ಬಗ್ಗೆ ನೆರೆಯ ಭಾಷೆಗಳಲ್ಲಿಯೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ನಾಲ್ಕು ವರ್ಷಗಳಿಂದ ನಿರ್ದೇಶಕ ಹೇಮಂತ್ ರಾವ್ ಅವರ ನೋವೊಂದು ಹಾಗೆಯೇ ಉಳಿದಿದೆ.
ಚಿತ್ರಕ್ಕೆ ಅನ್ಯಾಯ
ಇಷ್ಟೆಲ್ಲಾ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾದರೂ ನಾಲ್ಕು ವರ್ಷಗಳಿಂದ ಚಿತ್ರಕ್ಕೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ನಿರ್ದೇಶಕ ಹೇಮಂತ್ ಬೇಸರ ಹೊರ ಹಾಕಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವನ್ನು ಡಿಸ್ನಿಯ ಹಾಟ್ಸ್ಟಾರ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ವೀಕ್ಷಿಸಬಹುದಾಗಿದೆ. ಆದರೆ ಕನ್ನಡೇತರರಿಗೆ ಸಿನಿಮಾ ನೋಡಿದರೂ ಅವರಿಗೆ ಅರ್ಥವಾಗಲಾರದು. ಏಕೆಂದರೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವನ್ನು ಕನ್ನಡೇತರರು ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಸಬ್ ಟೈಟಲ್ ಅಗತ್ಯ. ಆದರೆ, ಡಿಸ್ನಿ ಹಾಟ್ಸ್ಟಾರ್ನಲ್ಲಿ ಇಂಗ್ಲಿಷ್ ಸಬ್ ಟೈಟಲ್ ಪ್ರಸಾರವಾಗುತ್ತಿಲ್ಲ. ಇದರಿಂದ ಒಟಿಟಿಗೆ ಬಂದ ಬಳಿಕವೂ ಲಕ್ಷಾಂತರ ಜನರಿಗೆ ಈ ಚಿತ್ರ ತಲುಪುತ್ತಿಲ್ಲ.
ಈ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಬೇಸರ ಹೊರಹಾಕಿದ್ದು, ‘ನನ್ನ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟು’ವಿನ ಇಂಗ್ಲಿಷ್ ಸಬ್ ಟೈಟಲ್ಗಳನ್ನು ಅಪ್ಲೋಡ್ ಮಾಡಿ. ನಾನು ನಿಮಗಾಗಿ ಸಬ್ ಟೈಟಲ್ ಬರೆದಿದ್ದೆ. ನಿಮಗೆ ಅನೇಕ ಬಾರಿ ಕರೆ ಕೂಡ ಮಾಡಿದ್ದೇನೆ. ಆದರೆ ನಾಲ್ಕು ವರ್ಷಗಳಲ್ಲಿ ಏನೂ ಆಗಿಲ್ಲ. ಬೇಕೆಂದರೆ ಸಬ್ ಟೈಟಲ್ಗಳನ್ನು ಮತ್ತೆ ಕಳುಹಿಸಲು ಸಿದ್ಧನಿದ್ದೇನೆ’ ಎಂದು ತಿಳಿಸಿದ್ದಾರೆ.








