ಒಮಿಕ್ರಾನ್ ನಂತ XE ಸರದಿ – ತಾಂತ್ರಿಕ ಸಮಿತಿಯಿಂದ ತುರ್ತು ಸಭೆ
ಒಮಿಕ್ರಾನ್ ಸೋಂಕಿನ ತೀವ್ರತೆ ಕಡಿಮೆ ಆಯ್ತು ಎನ್ನುವಾಗಲೇ ಮತ್ತೊಂದು ಹೊಸ ರೂಪಾಂತರಿ XE ಜನರನ್ನ ಬೀತಿಗೊಳಿಸಲು ಶುರುಮಾಡಿದೆ. ದೇಶದಲ್ಲಿ ಎಕ್ಸ್ ಇ ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದು ತಾಂತ್ರಿಕ ಸಲಹಾ ಸಮಿತಿ ನೇತೃತ್ವದಲ್ಲಿ ಆರೋಗ್ಯ ಸಚಿವ ಸುಧಾಕರ್ ತುರ್ತು ಸಭೆ ನಡೆಸಿದರು.
ನಾಲ್ಕನೇ ಅಲೆಯನ್ನ ತಡೆಯಲು ಜನರು ಕೈ ಜೋಡಿಸಬೇಕಿದ್ದು, ಎಂದಿನಂತೆ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ಬಳಿಕ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಯಾರಿಂದಲೂ ಉದಾಸೀನ ವರ್ತನೆ ಬೇಡ. ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ನಿರ್ಲಕ್ಷ್ಯಬೇಡ. ಬಾಕಿ ಇರುವವರು 2, 3ನೇ ಡೋಸ್ ಕೂಡಲೇ ಹಾಕಿಸಿಕೊಳ್ಳಿ ಎಂದು ತಿಳಿಸಿದರು.
ದಕ್ಷಿಣ ಕೊರಿಯಾ, ಹಾಂಕಾಂಗ್, ಬ್ರಿಟನ್, ಜರ್ಮನಿ ಮತ್ತು ಚೀನಾ ಸೇರಿ 8 ದೇಶಗಳಿಂದ ಬರುವವರಿಗೆ ಶೀಘ್ರವೇ ಮಾರ್ಗಸೂಚಿ ಹೊರಡಿಸುತ್ತೇವೆ. ಎಂಟು ದೇಶಗಳಲ್ಲಿ ರೂಪಾಂತರಿ XE ಸೋಂಕು ಹೆಚ್ಚಾಗುತ್ತಿದೆ. ದೇಶದಲ್ಲೂ ರೂಪಾಂತರಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಲಾಯಿತು. ವಿದೇಶದಿಂದ ಬಂದವರಿಗೆ ಟೆಸ್ಟಿಂಗ್ ನಡೆಸಲು ತೀರ್ಮಾನ ಮಾಡಲಾಗಿದೆ. ಮಕ್ಕಳ ಮೇಲೆ ಹೆಚ್ಚು ನಿಗಾ ಇಡುವಂತೆ ತಿಳಿಸಿದ್ದು, 5 ಸಾವಿರ ಮಕ್ಕಳಿಗೆ ಟೆಸ್ಟಿಂಗ್ ಮಾಡಲು ಸಲಹೆ ನೀಡಿದ್ದಾರೆ ಎಂದು ಹೇಳಿದರು.








