ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದವು. ಆದರೆ, ಹೈಕೋರ್ಟ್ ಪ್ರಕರಣಗಳಿಗೆ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ದಾಖಲಿಸಲಾದ ಎಫ್‌ಐಆರ್ ರದ್ದು ಕೋರಿ ಬಸನಗೌಡ ಪಾಟೀಲ ಯತ್ನಾಳ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಯತ್ನಾಳ್ ಅವರು ಸಚಿವರ ಪತ್ನಿ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದಿದ್ದಾರೆಯೇ ಹೊರತು, ಪಾಕ್ ಜೊತೆ ನಂಟಿದೆ ಎಂದು ಹೇಳಿಲ್ಲ. ದೂರುದಾರರು ತಮ್ಮನ್ನು ಪಾಕಿಸ್ತಾನದ ಉಗ್ರಗಾಮಿಗಳಿಗೆ ಹೋಲಿಸಿರುವುದಾಗಿ ಹೇಳಿದ್ದಾರೆ. ಇದು ಅವರ ಊಹೆಯೇ ಹೊರತು ಬೇರೆಯಲ್ಲ ಎಂದು ಯತ್ನಾಳ್ ಪರ ವಕೀಲ ವೆಂಕಟೇಶ ಪಿ. ದಳವಾಯಿ ವಾದಿಸಿದ್ದಾರೆ.
ದೂರುದಾರರು ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಪಾಕ್ ಒಂದು ದೇಶ, ಧರ್ಮವಲ್ಲ. ಅರ್ಜಿದಾರರು ಧರ್ಮದ ನಡುವೆ ದ್ವೇಷ ಹುಟ್ಟು ಹಾಕುವ ಯಾವುದೇ ಹೇಳಿಕೆ ನೀಡಿಲ್ಲ. ಅವರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಕುರಿತು ಯತ್ನಾಳ್ ವಿರುದ್ಧ ದೂರು ದಾಖಲಿಸಿರುವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು, ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯತ್ನಾಳ್ ನಮ್ಮ ಕುಟುಂಬದ ಗೌರವ ಹಾಳು ಮಾಡುವ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಯತ್ನಾಳ್ ವಿರುದ್ಧ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.