Hijab case: ಸುಪ್ರೀಂನಲ್ಲಿ ವಿಚಾರಣೆ ಮುಕ್ತಾಯ – ತೀರ್ಪು ಕಾಯ್ದಿರಿಸಿದ ಪೀಠ
ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಿರುವುದನ್ನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಕೊನೆಗೊಂಡಿದೆ. 10 ದಿನಗಳ ವಿಚಾರಣೆ ನಡೆಸಿದ ಪೀಠ, ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ತೀರ್ಪು ಕಾಯ್ದಿರಿಸಿದ್ದಾರೆ.
ಅರ್ಜಿದಾರರ ಪರವಾಗಿ 20ಕ್ಕೂ ಹೆಚ್ಚು ವಕೀಲರು ಹಾಜರಾಗಿದ್ದರು. ಹಿರಿಯ ವಕೀಲರಾದ ರಾಜೀವ್ ಧವನ್, ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ದೇವದತ್ ಕಾಮತ್, ಸಂಜಯ್ ಹೆಗ್ಡೆ ಮತ್ತಿತರರು ಸೇರಿದ್ದಾರೆ. ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ, ಎಎಸ್‌ಜಿ ಕೆ.ಎಂ.ನಟರಾಜ್ ಮತ್ತು ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದರು.
ಸರ್ಕಾರದ ವಾದವನ್ನು ಎದುರಿಸಲು ಅರ್ಜಿದಾರರ ವಕೀಲರಿಗೆ ನ್ಯಾಯಾಲಯ ಗುರುವಾರ ಕಾಲಾವಕಾಶ ನೀಡಿದೆ. ಹಿಜಾಬ್ ಧರಿಸುವುದರಿಂದ ಶಿಕ್ಷಣ ಮತ್ತು ಶಿಸ್ತನ್ನು ಹೇಗೆ ಅಡ್ಡಿಪಡಿಸುತ್ತದೆ ಎಂಬುದಕ್ಕೆ ಸರಿಯಾದ ಕಾರಣವನ್ನು ವಿವರಿಸಿಲ್ಲ ಎಂದು ಹಿರಿಯ ವಕೀಲ ಹುಝೆಫಾ ಅಹ್ಮದಿ ವಾದಿಸಿದರು.
ಈ ಪೀಠದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅಕ್ಟೋಬರ್ 16 ರಂದು ನಿವೃತ್ತರಾಗಲಿದ್ದಾರೆ. ಹಾಗಾಗಿ ಅದಕ್ಕೂ ಮುನ್ನ ಈ ತೀರ್ಪು ಹೊರಬೀಳುವ ಸಾಧ್ಯತೆ ಇದೆ.