ಇಸ್ಲಮಾಬಾದ್ : ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನ ವಾಯುಸೇನೆಯ ಪೈಲಟ್ ಆಗಿ ಹಿಂದು ಯುವಕನೊಬ್ಬನನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಆ ಯುವಕನ ಹೆಸರು ರಾಹುಲ್ ದೇವ್, ಸದ್ಯ ಪಾಕಿಸ್ತಾನ ವಾಯುಸೇನೆ (ಪಿಎಎಫ್?)ಯ ಜನರಲ್ ಡ್ಯೂಟಿ ಪೈಲಟ್ ಅಧಿಕಾರಿಯಾಗಿ ನೇಮಕವಾಗಿದ್ದಾರೆ.
ಪಾಕ್ ಮಾಧ್ಯಮಗಳ ಪ್ರಕಾರ ರಾಹುಲ್ ದೇವ್, ಸಿಂಧ್ ಪ್ರಾಂತ್ಯದ ಅತಿದೊಡ್ಡ ಜಿಲ್ಲೆ ಥಾರ್ಪಾರ್ಕರ್ ಮೂಲದವರು. ವಿಶೇಷವೆಂದರೆ ಥಾರ್ಪಾರ್ಕರ್ ಜಿಲ್ಲೆಯಲ್ಲಿ ಹಿಂದು ಸಮುದಾಯ ಅತಿದೊಡ್ಡ ಸಂಖ್ಯೆಯಲ್ಲಿದೆ.
ಇನ್ನು ದೇವ್ ವಾಯುಸೇನೆ ಪೈಲಟ್ ಆಗಿ ನೇಮಕವಾಗಿರುವುದಕ್ಕೆ ಅಖಿಲ ಪಾಕಿಸ್ತಾನ ಹಿಂದು ಪಂಚಾಯತ್ ಕಾರ್ಯದರ್ಶಿ ರವಿ ದವಾನಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಅನೇಕ ಸದಸ್ಯರು ನಾಗರಿಕ ಸೇವೆಯ ಜತೆಗೆ ಸೇನೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಖುಷಿಪಟ್ಟರು. ಸರ್ಕಾರ ಹೀಗೆ ನಿರಂತರವಾಗಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಗಮನಹರಿಸಿದರೆ, ರಾಹುಲ್ ದೇವ್ ರಂತ ಅನೇಕರು ದೇಶಕ್ಕೆ ಸೇವೆ ಸಲ್ಲಿಸುವ ದಿನ ದೂರವಿಲ್ಲ ಎಂದು ದವಾನಿ ಅಭಿಪ್ರಾಯಪಟ್ಟಿದ್ದಾರೆ.








