ಸಹಾಯಕ ಪೊಲೀಸ್ ಕಮಿಷನರ್ ತಮ್ಮ ಮನೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ.
ಅಲ್ಲದೇ, ಪತ್ನಿ ಮತ್ತು ಸೋದರಳಿಯನನ್ನು ಕೂಡ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾನೇರ್ ಪ್ರದೇಶದ ಎಸಿಪಿ ಭರತ್ ಗಾಯಕ್ವಾಡ್ ಅವರ ಬಂಗಲೆಯಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಭರತ್ ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಆದರೆ, ಎಸಿಪಿ ಭರತ್ ಗಾಯಕ್ವಾಡ್ ಅವರು ತಮ್ಮ ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನ ಸದ್ದು ಕೇಳಿದ ತಕ್ಷಣ ಅವರ ಮಗ ಮತ್ತು ಸೋದರಳಿಯ ರೂಮ್ ನಿಂದ ಓಡಿ ಬಂದಿದ್ದಾರೆ. ಮೊದಲು ರೂಮ್ ಬಾಗಿಲು ತೆರೆದು ಹೊರಗೆ ಬಂದ ತಮ್ಮ ಸೋದರಳಿಯನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಭರತ್ ಗಾಯಕ್ವಾಡ್ ಕೂಡ ತಮ್ಮ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗುಂಡೇಟಿನಿಂದ ಸಾವನ್ನಪ್ಪಿರುವವರನ್ನು ಎಸಿಪಿ ಭರತ್ ಗಾಯಕ್ವಾಡ್ ಅವರ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ಗುರುತಿಸಲಾಗಿದೆ.