ಕನ್ನಡ ಪ್ರದೇಶ ಗ್ರಾಮಗಳ ಐತಿಹಾಸಿಕ ಹೆಸರು ಬದಲಾವಣೆ ಸಲ್ಲದು: ಟಿಎಸ್ ನಾಗಾಭರಣ
ಬೆಂಗಳೂರು: ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನ ಮಂಜೇಶ್ವರ ಮತ್ತು ಕಾಸರಗೋಡು ತಾಲ್ಲೂಕಿನ ಕೆಲವು ಕನ್ನಡ ಪ್ರದೇಶ ಗ್ರಾಮಗಳ ಹೆಸರನ್ನು ಮಲಯಾಳಂಗೆ ಬದಲಾಯಿಸಲು ಹೊರಟಿರುವ ಕ್ರಮ ಅತ್ಯಂತ ಖಂಡನೀಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶತಮಾನಗಳ ಹಿಂದೆಯೇ ಕರ್ನಾಟಕದ ಸಾಹಿತ್ಯ, ಸಾಂಸ್ಕೃತಿಕ, ಐತಿಹಾಸಿಕ, ಪರಂಪರೆಯನ್ನು ಒಗ್ಗೂಡಿಸಿ ಆ ಗ್ರಾಮಗಳಿಗೆ ಕನ್ನಡದ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಆದರೆ ಈಗ ಅದನ್ನು ಬದಲಾಯಿಸಲು ಹೊರಟಿರುವ ಹುನ್ನಾರ ಸರಿಯಾದ ಕ್ರಮವಲ್ಲ. ಅಲ್ಲದೆ ಆ ಪ್ರದೇಶದಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚಾಗಿ ಬಳಸುವ ಮತ್ತು ಅಪಾರ ಸಂಖ್ಯೆಯಲ್ಲಿ ಕನ್ನಡಿಗರಿರುವ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಕೇರಳ ಸರ್ಕಾರ ಮಾಡಬಾರದು ಎಂದು ಅಧ್ಯಕ್ಷರು ಹೇಳಿದ್ದಾರೆ.
ಗಡಿಭಾಗದ ಯಾವುದೇ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮತೆ ಮತ್ತು ಬದ್ಧತೆಯಿಂದ ನಡೆದುಕೊಳ್ಳ ಬೇಕಾಗಿರುವುದು ಎರಡು ರಾಜ್ಯಗಳ ಜವಾಬ್ದಾರಿಯಾಗಿದೆ. ಇದನ್ನು ಕೇರಳ ರಾಜ್ಯ ಅರಿತುಕೊಳ್ಳಬೇಕು. ಅಲ್ಲಿನ ಕೇರಳ ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಪ್ರಸ್ತುತ ಗ್ರಾಮಗಳಿಗೆ ಇಡಲಾಗಿರುವ ಕನ್ನಡದ ಹೆಸರುಗಳನ್ನು ಉಳಿಸಿಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಕಂದಾಯ ಇಲಾಖೆಗೆ ಸೂಚಿಸುವಂತೆ ಒತ್ತಾಯಿಸಿದ್ದಾರೆ.
ಈ ಕೆಳಗೆ ಗ್ರಾಮಗಳಿಗೆ ಪ್ರಸ್ತುತ ಇರುವ ಕನ್ನಡದ ಹೆಸರು ಮತ್ತು ಬದಲಾಯಿಸಲು ಹೊರಟಿರುವ ಮಲಯಾಳಂ ಹೆಸರನ್ನು ಗಮನಿಸಬಹುದು. ಈಗಿರುವ ಕನ್ನಡದ ಹೆಸರುಗಳು ಅತ್ಯಂತ ಅರ್ಥಪೂರ್ಣವಾಗಿವೆ. ಹೀಗಿರುವಾಗ ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಕೆಲಸವನ್ನು ಮಾಡಬಾರದು. ಈ ಪ್ರಕ್ರಿಯೆಯಲ್ಲಿ ಕೇರಳ ಮುಂದುವರೆದರೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಹೊರನಾಡಿನ ವಿವಿಧ ಸಂಘಟನೆಗಳೊಂದಿಗೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಧೂರು _ಮಧುರಮ್
ಮಲ್ಲ _ಮಲ್ಲಮ್
ಕಾರಡ್ಕ _ಕಡಗಮ್
ಬೇದಡ್ಕ _ಬೆಡಗಮ್
ಪಿಳಿಕುಂಜೆ _ಪಿಳಿಕುನ್ನು ಆನೆಬಾಗಿಲು _ಆನೆವಾಗಿಲ್
ಮಂಜೇಶ್ವರ _ಮಂಜೇಶ್ವರಮ್
ಹೊಸದುರ್ಗ_ ಪುದಿಯಕೋಟ
ಕುಂಬಳೆ _ಕುಂಬ್ಳಾ ಸಸಿಹಿತ್ಲು _ಶೈವಲಪ್
ನೆಲ್ಲಿಕುಂಜ _ ನೆಲ್ಲಿಕುನ್ನಿ
ಕರ್ನಾಟಕದ ಹೊರನಾಡು ಜಿಲ್ಲೆಗಳಲ್ಲಿರುವ ಕನ್ನಡ ಸಂಘಟನೆಗಳು ಈ ಕುರಿತು ಈಗಾಗಲೇ ವಿರೋಧವನ್ನು ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಅಲ್ಲಿನ ಗ್ರಾಮಗಳಿಗೆ ಇಡಲಾಗಿರುವ ಕನ್ನಡದ ಹೆಸರನ್ನು ಮಲಯಾಳಂ ಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಟ್ಟು ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಕೇರಳ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
#Historical #Kannada