ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಬೊಕ್ಕಸಕ್ಕೆ ಇವತ್ತು ಬೇಡ ಬೇಡ ಅಂದ್ರೂ ದುಡ್ಡು ಸುನಾಮಿಯಂತೆ ಹರಿದುಬರುತ್ತಿದೆ. ಟೀಮ್ ಇಂಡಿಯಾ (Team India) ಮತ್ತು ಐಪಿಎಲ್ (IPL) ಇವು ಬಿಸಿಸಿಐನ ಎರಡು ಕಣ್ಣುಗಳು. ಈ ಎರಡು ಕಣ್ಣುಗಳ ಸೆಳೆತವಿದೆಯಲ್ವಾ ಅದೊಂದು ರೀತಿಯ ವಿಸ್ಮಯ. ಎಂಥವರನ್ನು ಕೂಡ ಒಂದು ಕ್ಷಣ ಸೂಜಿಗಲ್ಲಿನಂತೆ ಆಕರ್ಷಿಸುವ ಆ ಎರಡು ನಯನಗಳನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವ ಕ್ರಿಕೆಟ್ ಕಾತರದಿಂದ ಕಾಯುತ್ತಿರುತ್ತದೆ. ಅಷ್ಟೇ ಅಲ್ಲ, ಬಿಸಿಸಿಐನ ನೇತ್ರಗಳ ನೋಟಕ್ಕೆ ಕಾರ್ಪೋರೇಟ್ ಜಗತ್ತು ಕೂಡ ನಾಚಿ ನೀರಾಗಿ ತಲೆ ಬಾಗುವುದು. ಹೌದು, ಬಿಸಿಸಿಐನ ಲೋಚನ ಕಾಂತಿಯೇ ಅಂತಹುದ್ದು. ಪ್ರಕಾಶಮಾನವಾಗಿ ಹೊಳೆದಾಗ ಆ ಕಂಗಳಲ್ಲಿ ಆನಂದಭಾಷ್ಪ ಸುರಿಯುತ್ತದೆ. ಆದ್ರೆ ಆ ನೋಟಕ್ಕೆ ಸ್ವಲ್ಪ ಮಂಕು ಬಡಿದ್ರೂ ಸಾಕು ಕಣ್ಣೀರೇ ಸುರಿಯುತ್ತದೆ. ಹಾಗೇ, ಕೋಟಿ ಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಗೀತೆಗಳಿಗೆ ಈ ಎರಡು ಕಣ್ಣುಗಳು ಸಾಕ್ಷಿಯಾಗುತ್ತಿವೆ. ಜೊತೆಗೆ ಈ ಎರಡು ಅಕ್ಷಿಪಟಲದೊಳಗೆ ಬಂಧಿಯಾಗಲು ನಾ ಮುಂದು ತಾ ಮುಂದು ಅಂತ ಮುಗಿಬಿದ್ದಾಗ ಸಹಜವಾಗಿಯೇ ಬಿಸಿಸಿಐನ ಬೊಕ್ಕಸದಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ.. ನೋಡಾ..!
ಸುಮಾರು 49 ವರುಷಗಳ ಹಿಂದೆ.. ಇದೇ ಬಿಸಿಸಿಐ ಬೊಕ್ಕಸದಲ್ಲಿ ಆಟಗಾರರಿಗೆ ಸಂಭಾವನೆ ನೀಡಲು ಸಹ ದುಡ್ಡಿರಲಿಲ್ಲ. ಕಪಿಲ್ ಡೆವಿಲ್ಸ್ 1983ರ ವಿಶ್ವಕಪ್ ಗೆದ್ದಾಗ ಆಟಗಾರರಿಗೆ ಸನ್ಮಾನ ಮಾಡಲು ಕೂಡ ಬಿಸಿಸಿಐ ಬಳಿ ಹಣವಿರಲಿಲ್ಲ. ಕೊನೆಗೆ ಲತಾ ಮಂಗೇಶ್ಕರ್ ರವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಮಾಡಿಸಿ ವಿಶ್ವಕಪ್ ವಿಜೇತ ತಂಡದ ಆಟಗಾರರನ್ನು ಗೌರವಿಸಲಾಯ್ತು. ಇನ್ನು, 1983ರ ಫೈನಲ್ ಪಂದ್ಯಕ್ಕೆ ಎರಡು ಟಿಕೆಟ್ ನೀಡಲು ನಿರಾಕರಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಸೆಡ್ಡು ಹೊಡೆದಿದ್ದು ಆಗಿನ ಬಿಸಿಸಿಐ ಅಧ್ಯಕ್ಷ ಎನ್ಕೆಪಿ ಸಾಳ್ವೆ. ಮೊದಲು ಏಷ್ಯನ್ ಕ್ರಿಕೆಟ್ ಸಮಿತಿಯನ್ನು ರಚನೆ ಮಾಡಿದ ಸಾಳ್ವೆ ಅವರು 1984ರಲ್ಲಿ ಏಷ್ಯಾಕಪ್ ಟೂರ್ನಿಯನ್ನು ಆಯೋಜನೆ ಮಾಡಿದ್ರು. ಬಳಿಕ ಬಿಸಿಸಿಐ ಮತ್ತು ಪಿಸಿಬಿ ೧೯೮೭ರ ವಿಶ್ವಕಪ್ ಟೂರ್ನಿಯನ್ನು ಜಂಟಿಯಾಗಿ ಆಯೋಜನೆ ಮಾಡಿತ್ತು. ಈ ಮೂಲಕ ಭಾರತಕ್ಕೂ ಟೂರ್ನಿಯನ್ನು ಸಂಘಟಿಸುವ ಶಕ್ತಿ ಇದೆ ಎಂಬುದನ್ನು ಸಾಬೀತುಪಡಿಸಿದ್ದು ಈಗ ಇತಿಹಾಸ.
ಇದನ್ನೂ ಓದಿ: ಭಾರತಕ್ಕೆ ಜಯದ ಸಿಂಧೂರ: ಕಪ್ ಸ್ವೀಕರಿಸದೆ ಪಾಕಿಸ್ತಾನದ ಮಾನ ಕಳೆದ ಬ್ಲೂ ಬಾಯ್ಸ್
ಹಾಗೇ ನೋಡಿದ್ರೆ ಕ್ರಿಕೆಟ್ ನಿಂದ ದುಡ್ಡು ಮಾಡಬಹುದು ಎಂಬುದನ್ನು ಮೊದಲು ಹೇಳಿಕೊಟ್ಟಿದ್ದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಆಡಳಿತಾಧಿಕಾರಿ ಆಲಿ ಬಾಕರ್. ೧೯೯೧ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ನೇರ ಪ್ರಸಾರದ ಹಕ್ಕಿನಿಂದ ದುಡ್ಡು ಬಂತು. ಬಿಸಿಸಿಐನ ಆಗಿನ ಆಡಳಿತಾಧಿಕಾರಿ ದಾಲ್ಮಿಯಾಗೆ ಕರೆ ಮಾಡಿದ ಆಲಿ ಬಾಕರ್ ನೇರ ಪ್ರಸಾರದ ಮೂಲಕ ಹಣ ಮಾಡುವ ತಂತ್ರವನ್ನು ಹೇಳಿಕೊಟ್ಟಿದ್ದರು. ಅದಕ್ಕಿಂತ ಮೊದಲು ದೂರದರ್ಶನದಲ್ಲಿ ನೇರ ಪ್ರಸಾರವನ್ನು ಉಚಿತವಾಗಿ ಪ್ರಸಾರ ಮಾಡಲಾಗುತ್ತಿತ್ತು. ಆದ್ರೆ ಕ್ರಿಕೆಟ್ ನೇರ ಪ್ರಸಾರದಿಂದ ದುಡ್ಡು ಬರುತ್ತೆ ಅಂತ ಗೊತ್ತಾದಾಗ ಬಿಸಿಸಿಐ ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಮುಂದಾಯ್ತು. ಅದೇ ಮೊದಲು ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ಸಚಿನ್ ಪರ್ವ ಶುರುವಾದಾಗ ಜನ ಮೈದಾನಕ್ಕೆ ಬಂದು ಕ್ರಿಕೆಟ್ ಮ್ಯಾಚ್ ನೋಡಲು ಮುಗಿಬೀಳುತ್ತಿದ್ದರು. ಕಾರ್ಪೊರೇಟ್ ಕಂಪೆನಿಗಳು ಪ್ರಾಯೋಜಕತ್ವಕ್ಕಾಗಿ ಬಿಸಿಸಿಐನ ಬಾಗಿಲು ಬಡಿಯುತ್ತಿದ್ದವು. ಬಿಸಿಸಿಐ ಬೊಕ್ಕಸಕ್ಕೆ ಹಣ ನೀರಿನಂತೆ ಹರಿದುಬರುತ್ತಿತ್ತು. ವಿಶ್ವ ಕ್ರಿಕೆಟ್ಗೆ ಭಾರತ ಸೂಪರ್ ಸ್ಟಾರ್ ಆಟಗಾರರನ್ನು ಪರಿಚಯಿಸಿತ್ತು. ಸಚಿನ್ ಪರ್ವ ಮುಗಿದ ನಂತರ ವಿರಾಟ್ನ ದರ್ಶನ ಶುರುವಾಯ್ತು.. ಅದೇ ಟೈಮ್ ನಲ್ಲಿ ಬಿಸಿಸಿಐನ ಇನ್ನೊಂದು ಕಣ್ಣು ಐಪಿಎಲ್ ಪ್ರಕಾಶಮಾನವಾಗಿ ಹೊಳೆಯಲು ಆರಂಭವಾಯ್ತು. ಐಪಿಎಲ್ ಪ್ರಖರಕ್ಕೆ ಬಿಸಿಸಿಐನ ಸಂಪತ್ತು ಪಳಪಳ ಹೊಳೆಯುವ ಮೂಲಕ ವಿಶ್ವ ಕ್ರಿಕ
ಸದ್ಯದ ಬಿಸಿಸಿಐ ಬೊಕ್ಕಸದಲ್ಲಿರುವ ದುಡ್ಡನ್ನು ನೋಡಿದ್ರೆ ಅಚ್ಚರಿಯಾಗುತ್ತದೆ. ಒಂದೊಂದು ರೂಪಾಯಿಗೂ ಒದ್ದಾಟ ನಡೆಸುತ್ತಿದ್ದ ಬಿಸಿಸಿಐ ಇಷ್ಟೊಂದು ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಹೊರಹೊಮ್ಮಿರುವುದರ ಹಿಂದೆ ಹಲವು ಕ್ರಿಕೆಟ್ ಆಡಳಿತಗಾರರ ಪರಿಶ್ರಮವಿದೆ. ದೂರದೃಷ್ಟಿ, ಲೆಕ್ಕಚಾರ, ವೃತ್ತಿಪರತೆ, ಆಡಳಿತದಲ್ಲಿನ ಶಿಸ್ತಿನಿಂದ ಇವತ್ತು ಭಾರತೀಯ ಕ್ರಿಕೆಟ್ ಯಶಸ್ಸಿನ ಉತ್ತುಂಗದಲ್ಲಿದೆ. ಜೊತೆಗೆ ಆಟಗಾರರ ಬದ್ಧತೆ, ಕ್ರಿಕೆಟ್ ಮೇಲಿನ ಪ್ರೀತಿ, ಸಾಧನೆ, ದಾಖಲೆಗಳು ಎಲ್ಲವೂ ಬಿಸಿಸಿಐಗೆ ವರದಾನವಾಗಿದೆ. ಕ್ರಿಕೆಟ್ನ ಆಗು ಹೋಗುಗಳನ್ನು ಸಮಾಧಾನವಾಗಿ ಕೇಳಿಸಿಕೊಂಡು, ಖಡಕ್ ಮಾತಿನ ಮೂಲಕ ಐಸಿಸಿಯನ್ನು ಹಿಡಿತದಲ್ಲಿಟ್ಟುಕೊಂಡು ವಿಶ್ವ ಕ್ರಿಕೆಟ್ನಲ್ಲಿ ಮಂದಹಾಸದ ನಗುವನ್ನು ಚೆಲ್ಲುತ್ತಿದೆ.
ಅಂದಹಾಗೇ ಬಿಸಿಸಿಐ ಟಾಪ್ ಟೆನ್ ಕ್ರಿಕೆಟ್ ಮಂಡಳಿಗಳಲ್ಲಿ ಅಗ್ರಸ್ಥಾನದಲ್ಲಿದೆ. ಒಂದು ಅಂದಾಜಿನ ಪ್ರಕಾರ 2024ರಲ್ಲಿ ಬಿಸಿಸಿಐ ಬೊಕ್ಕಸದ ಸಾಮರ್ಥ್ಯ ೧೮,೭೬೦ ಕೋಟಿ ರೂಪಾಯಿ. ಎರಡನೇ ಸ್ಥಾನದಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಖಜಾನೆ ಸಾಮರ್ಥ್ಯ̇೬೫೮ ಕೋಟಿ ರೂಪಾಯಿ. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಅಕೌಂಟ್ನಲ್ಲಿರುವುದು 492 ಕೋಟಿ ರೂಪಾಯಿ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನಲ್ಲಿರುವುದು ೪೫೮ ಕೋಟಿ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಲ್ಲಿ ೪೨೫ ಕೋಟಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಲ್ಲಿ 392 ಕೋಟಿ, ಜಿಂಬಾಬ್ವೆ ಕ್ರಿಕೆಟ್ ಮಂಡಳಿಯಲ್ಲಿ ೩೧೭ ಕೋಟಿ, ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ 166 ಕೋಟಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಲ್ಲಿ ೧೨೫ ಕೋಟಿ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯಲ್ಲಿ ೭೫ ಕೋಟಿ ರೂಪಾಯಿ. ಬಹುಶಃ ಟಾಪ್ ೯ ಮಂಡಳಿಗಳ ಒಟ್ಟು ಮೊತ್ತವನ್ನು ಪೇರಿಸಿದ್ರೂ ಬಿಸಿಸಿಐ ಖಜಾನೆಯಲ್ಲಿ ಐದಾರು ಪಟ್ಟು ಹೆಚ್ಚು ಹಣ ಮಿನುಗುತ್ತಿದೆ.
ಯಾರು ಏನು ಬೇಕಾದ್ರೂ ಹೇಳಲಿ, ಬಿಸಿಸಿಐ ಬೆಳೆದು ಬಂದ ರೀತಿ ಮಾತ್ರ ಅದ್ಭುತ. ವಿಶ್ವ ಕ್ರಿಕೆಟ್ನ ಪವರ್ ಹೌಸ್ ಆಗಿರುವ ಬಿಸಿಸಿಐ ಇವತ್ತು ಐಸಿಸಿಯನ್ನೇ ತುದಿ ಬೆರಳಿನಲ್ಲಿ ಆಡಿಸುತ್ತಿದೆ. ಕ್ರಿಕೆಟ್ ಆಡುವ ಯಾವುದೇ ದೇಶವಿರಲಿ.. ಅಲ್ಲಿ ದುಡ್ಡು ಬರಬೇಕಾದ್ರೆ ಟೀಮ್ ಇಂಡಿಯಾ ಆಡಲೇಬೇಕು. ಆಗ ಮಾತ್ರ ಆ ದೇಶಗಳ ಖಜಾನೆ ತುಂಬುತ್ತದೆ. ಅದಕ್ಕಾಗಿಯೇ ಪಾಕಿಸ್ತಾನ ಭಾರತದ ಜೊತೆ ಕಾಡಿಬೇಡಿಯಾದ್ರೂ ಆಡಬೇಕು ಎಂದು ಹಂಬಲಿಸುತ್ತಿರುವುದು. ಒಂದು ಅಂದಾಜಿನ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಭಾರತ – ಪಾಕ್ ಪಂದ್ಯಗಳಿಂದ ಸುಮಾರು ೧೦ ಸಾವಿರ ಕೋಟಿ ರೂಪಾಯಿ ವಹಿವಾಟು ಆಗಿದೆಯಂತೆ. ಅಂದ ಮೇಲೆ ಭಾರತದ ವಿರುದ್ಧ ಸೋತ್ರೂ ಪಾಕಿಸ್ತಾನ ಆಡಬೇಕು ಎಂದು ಗೊಗರೆಯುವುದು ಯಾಕೆ ಅಂತ ಗೊತ್ತಾಗುತ್ತದೆಯಲ್ವಾ.
ಅದಿರಲಿ, ಪಾಕಿಸ್ತಾನದ ಹಾಲಿ ನಾಯಕ ಸಲ್ಮಾನ್ ಆಗಾ ರನ್ನರ್ ಅಪ್ ಚೆಕ್ ಪಡೆದು ಕಸದ ಬುಟ್ಟಿಗೆ ಬಿಸಾಡಿದ್ದ. ಬಳಿಕ ಅದೇ ಚೆಕ್ನಲ್ಲಿರುವ ದುಡ್ಡನ್ನು ಭಾರತದ ದಾಳಿಗೆ ತುತ್ತಾದ ರಕ್ಕಸರ ಕುಟುಂಬಕ್ಕೆ ಕೊಡುತ್ತೇನೆ ಎಂದು ಹೇಳಿದ್ದ. ಒಂದು ವೇಳೆ ಆ ದುಡ್ಡು ನಿಜವಾಗಿಯೂ ಆಪರೇಷನ್ ಸಿಂಧೂರ ದಾಳಿಗೆ ತುತ್ತಾದ ನಾಗರೀಕರ ಕುಟುಂಬಕ್ಕೆ ನೀಡಿದ್ರೆ ಅರ್ಥವಿರುತ್ತದೆ. ಆದ್ರೆ ಭಯೋತ್ಪಾದಕರ ಕುಟುಂಬಕ್ಕೆ ನೀಡಿದ್ರೆ ಪಾಕ್ ವಿರುದ್ಧ ಭಾರತ ಮುಂದಿನ ದಿನಗಳಲ್ಲಿ ಆಡಬೇಕಾ ಎಂಬ ಪ್ರಶ್ನೆಯೇ ಬರಲ್ಲ. ಪಾಕ್ ವಿರುದ್ಧ ನಾವು ಆಡಿ ಆ ದುಡ್ಡು ಭಯೋತ್ಪಾದಕರ ಕೈಗೆ ಹೋಗಿ ಮತ್ತೆ ನಾವು ಪಶ್ಚಾತ್ತಾಪ ಮಾಡಿಕೊಳ್ಳುವುದು ಬೇಡ.
ಒಟ್ಟಿನಲ್ಲಿ ಸದ್ಯದ ಪರಿಸ್ಥಿತಿ ನೋಡಿದ್ರೆ ಭಾರತ – ಪಾಕ್ ಐಸಿಸಿ ಟೂರ್ನಿಗಳಲ್ಲಿ ಆಡುವುದು ಕೂಡ ಅನುಮಾನ ಅನ್ಸುತ್ತೆ. ಆದ್ರೆ ಕಾಲ ಎಲ್ಲ ಸಮಯದಲ್ಲೂ ಒಂದೇ ರೀತಿ ಇರಲ್ಲ ಅಲ್ವಾ..? ಅದೇನೇ ಇರಲಿ,, ದಿವಾಳಿಯಂಚಿನಲ್ಲಿದ್ದ ಬಿಸಿಸಿಐ ವಿಶ್ವ ಕ್ರಿಕೆಟ್ನ ಕುಬೇರನಾಗಿ ರಾರಾಜಿಸುತ್ತಿರುವುದು ಪಾಕಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂಬುದು ಅಷ್ಟೇ ಸತ್ಯ.
ಲೇಖಕರು: ಸನತ್ ರೈ
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








