ಸಕ್ಕರೆನಾಡು ಮಂಡ್ಯ ಹೇಳಿ ಕೇಳಿ ಜೆಡಿಎಸ್ ನ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿತ್ತು. ಈ ಮೂಲಕ ಕಾಂಗ್ರೆಸ್ ಮಂಡ್ಯದಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ತು. ಈ ಮಧ್ಯೆ ಮೈತ್ರಿ ಸರ್ಕಾರ ರಚನೆಗೊಂಡ ಬಳಿಕ ದಳಪತಿಗಳ ಒತ್ತಡಕ್ಕೆ ಮಣಿದು ಮಂಡ್ಯದಲ್ಲಿ ನಿಖಿಲ್ ಕುಮಾರ್ ಸ್ವಾಮಿಗೆ ಒಲ್ಲದ ಮನಸ್ಸಿನಲ್ಲಿ ಕಾಂಗ್ರೆಸ್ ಬೆಂಬಲ ಸೂಚಿಸಿತು. ಇದು ಕಾಂಗ್ರೆಸ್ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿತ್ತು. ಅಲ್ಲದೆ ಪಕ್ಷದ ವಿರುದ್ಧ ಸ್ಥಳೀಯ ನಾಯಕರು ತಿರುಗಿ ಬಿದ್ದರು. ಇದೀಗ ಮತ್ತೆ ಮಂಡ್ಯದಲ್ಲಿ ಹಳೆ ಚಾರ್ಮ್ ಪಡೆದುಕೊಳ್ಳಲು ಕಾಂಗ್ರೆಸ್ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ.
ಒಂದಾದ ಹೆಬ್ಬುಲಿ- ಹುಲಿಯಾ!
ಸಕ್ಕರೆನಾಡಿನಲ್ಲಿ ಮತ್ತೆ ಹಿಡಿತ ಸಾಧಿಸಲು ಮಾಜಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತ್ಯೇಕವಾಗಿ ತಂತ್ರ ರೂಪಿಸುತ್ತಿದ್ದಾರಂತೆ. ಇದರ ಭಾಗವಾಗಿಯೇ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ಅವರನ್ನು ಕಾಂಗ್ರೆಸ್ ಗೆ ಸೆಳೆಯಲು ಈ ಇಬ್ಬರು ತಯಾರಿ ಆರಂಭಿಸಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಅದರಲ್ಲೂ ಸುರೇಶ್ ಗೌಡ ಅವರೇ ಸ್ವತಃ ಈ ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸುರೇಶ್ ಗೌಡ ಯಾಕೆ?
ಸುರೇಶ್ ಗೌಡ ಪ್ರತಿನಿಧಿಸುತ್ತಿರುವ ನಾಗಮಂಗಲದಲ್ಲಿ ಹೆಚ್ ಡಿ ದೇವೇಗೌಡ ಕುಟುಂಬದ ಹಸ್ತಕ್ಷೇಪ ಮಾಡುತ್ತಿದೆಯಂತೆ. ಇದರಿಂದ ಸುರೇಶ್ ಗೌಡ ಅವರಿಗೆ ಬೇಸರವಾಗಿದ್ದು, ಪಕ್ಷ ಬಿಡಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಇನ್ನು ಈ ವಿಚಾರವಾಗಿ ಸುರೇಶ್ ಗೌಡ ಜೊತೆಗೆ ಕೆಲ ತಿಂಗಳ ಹಿಂದೆಯೇ ಡಿ.ಕೆ. ಶಿವಕುಮಾರ್ ರಾಜಕೀಯ ಮಾತುಗಳನ್ನು ಆರಂಭಿಸಿದ್ದು.. ‘ನಿನ್ನ ಕ್ಷೇತ್ರದ ಮೇಲೆ ದೊಡ್ಡಗೌಡರ ಕುಟುಂಬ ಹಸ್ತಕ್ಷೇಪ ಇರುವುದು ನನಗೆ ತಿಳಿದಿದೆ. ನೀನು ಸೈಲೆಂಟಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಸೇರಿಕೋ ನಿನ್ನನ್ನು ನಾನು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿಸುತ್ತೇನೆ ಎಂದು ಹೇಳಿದ್ದಾರಂತೆ.
ಅಲ್ಲದೆ ನಾಗಮಂಗಲ ಕ್ಷೇತ್ರದಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ಚೆಲುವರಾಯಸ್ವಾಮಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು, ಆತನನ್ನು ಗೆಲ್ಲಿಸೋಣ. ಈ ಮೂಲಕ ಮಂಡ್ಯ ಜಿಲ್ಲೆಯ ರಾಜಕೀಯದಲ್ಲಿ ಕಾಂಗ್ರೆಸ್ ಖಾತೆ ತೆರೆಯಲಿ. ನಾನು ನಿನ್ನ ಕೈ ಬಿಡುವುದಿಲ್ಲ. ನನ್ನನ್ನು ನಂಬಿ ನೀನು ರಾಜೀನಾಮೆ ನೀಡು’ ಅಂತ ಟ್ರಬಲ್ ಶೂಟರ್ ಸುರೇಶ್ ಗೌಡ ಅವರಿಗೆ ಹೇಳಿದ್ದಾರಂತೆ.
ಇನ್ನು ಸಿದ್ದರಾಮಯ್ಯ ಅವರನ್ನೂ ಸಹ ಸುರೇಶ್ ಗೌಡ ಅವರು ಭೇಟಿ ಮಾಡಿ ಈ ವಿಚಾರವಾಗಿ ಚರ್ಚಿಸಿದ್ದು, ಹುಲಿಯಾ ಬೇರೆಯದ್ದೇ ಪ್ಲಾನ್ ಹೇಳಿದ್ದಾರೆ ಎನ್ನಲಾಗುತ್ತಿದೆ.