ವಾಷಿಂಗ್ಟನ್: ಅಮೆರಿಕದಲ್ಲಿ (America) ಹೆಲೆನ್ ಚಂಡಮಾರುತದ (Hurricane) ಅಬ್ಬರ ಜೋರಾಗಿದ್ದು, ಕನಿಷ್ಠ 33 ಜನ ಬಲಿಯಾಗಿದ್ದಾರೆ ಎಂದು ತಿಳದು ಬಂದಿದೆ.
ಚಂಡಮಾರುತದಿಂದ ಫ್ಲೋರಿಡಾ (Florida) ರಾಜ್ಯದ ರಾಜಧಾನಿ ತಲ್ಲಾಹಸ್ಸೀ ಹತ್ತಿರ ಚಂಡಮಾರುತದಿಂದಾಗಿ ಭೂಕುಸಿತ ಸಂಭವಿಸಿದೆ. ಪರಿಣಾಮವಾಗಿ ರಸ್ತೆಗಳು, ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ನೆಲಸಮವಾಗಿವೆ. ಇದರೊಂದಿಗೆ ಪ್ರವಾಹ ಜೋರಾಗಿದ್ದು, ಹಲವು ಪ್ರದೇಶದಲ್ಲಿ ನೀರು ಹೊಕ್ಕು, ಜನ- ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ದಕ್ಷಿಣ ಕೆರೊಲಿನಾದಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ 14 ಜನ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ತನ್ನ ರಾಜ್ಯದಲ್ಲಿ ರಕ್ಷಣಾ ಸಿಬ್ಬಂದಿಯೂ ಸೇರಿದಂತೆ 11 ಜನ ಸಾವನ್ನಪ್ಪಿದ್ದಾರೆ. ವಾಲ್ಡೋಸ್ಟಾ ನಗರವು 115ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿದ್ದು, ಅನೇಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಮತ್ತು ಅಧಿಕಾರಿಗಳು ಹೆಲೆನ್ ಚಂಡಮಾರುತದಿಂದ ಹಾನಿಗೊಳಗಾಗುವ ಪ್ರದೇಶಗಳ ಕುರಿತು ಮೊದಲೇ ಸೂಚಿಸಿದ್ದರು. ಜನರನ್ನು ಬೇರೆಡೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಆದರೂ ಹಲವರು ಮನೆಗಳಲ್ಲೇ ಉಳಿದಿದ್ದರಿಂದಾಗಿ ಈ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ.