ಬೆಂಗಳೂರು: ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿಯೇ ಮತ್ತೊಂದು ಐತಿಹಾಸಿಕ ಮೈಲುಗಲ್ಲು ಮೆರೆದಿದೆ.
ರಾಯಲ್ ಚಾಲೆಂಜರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಸ್ಫೋಟಕ ಶತಕ, ಹೆನ್ರಿಕ್ ಕ್ಲಾಸೆನ್ ಅವರ ವೇಗದ ಅರ್ಧ ಶತಕ ಹಾಗೂ ಇನ್ನುಳಿದ ಆಟಗಾರರ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಹೈದರಾಬಾದ್ ತಂಡ ಬರೋಬ್ಬರಿ 287 ರನ್ ಗಳಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್ ಸಿಡಿಸಿದ್ದ ತನ್ನ ದಾಖಲೆಯನ್ನೇ ತಾನು ಮುರಿದಿದೆ. ಅತಿ ಹೆಚ್ಚು ರನ್ ಗಳಿಸಿದ್ದ ಆರ್‌ಸಿಬಿ ದಾಖಲೆಯನ್ನೂ ಆರ್ ಸಿಬಿ ವಿರುದ್ಧವೇ ನುಚ್ಚುನೂರು ಮಾಡಿದೆ.
ಟಾಸ್ ಗೆದ್ದಿದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದನ್ನು ಕರಾರುವಾಕ್ ಆಗಿ ಸದುಪಯೋಗಪಡಿಸಿಕೊಂಡ ಹೈದರಾಬಾದ್ ತಂಡದ ಆಟಗಾರರು, ಮೈದಾನದ ಎಲ್ಲ ಕಡೆ ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದರು. ಆರಂಭದಿಂದಲೇ ಚಚ್ಚಲು ಆರಂಭಿಸಿದರು. ಮೊದಲ ವಿಕೆಟಿಗೆ 8.1 ಓವರ್ ಗಳಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಬರೋಬ್ಬರಿ 108 ರನ್ ಗಳಿಸಿತ್ತು. ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 34 ರನ್ ಗಳಿಸಿ ಔಟಾಗುತ್ತಿದ್ದಂತೆ, ಕ್ರೀಸ್‌ಗೆ ಬಂದ ಹೆನ್ರಿಕ್ ಕ್ಲಾಸೆನ್, ಟ್ರಾವಿಡ್ ಹೆಡ್ ಜೊತೆಗೆ ಬೆಂಗಳೂರು ಬೌಲರ್ ಗಳನ್ನು ಚಂಡಾಡಲು ಆರಂಭಿಸಿದರು.
ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲಿ 102 ರನ್ (8 ಸಿಕ್ಸರ್, 9 ಬೌಂಡರಿ) ಚಚ್ಚಿದರೆ, ಹೆನ್ರಿಕ್ ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ (7 ಸಿಕ್ಸರ್, 2 ಬೌಂಡರಿ) ಗಳಿಸಿ ಔಟ್ ಆದರು. ಏಡನ್ ಮಾರ್ಕ್ರಮ್ ಸ್ಫೋಟಕ 32 ರನ್, ಅಬ್ದುಲ್ ಸಮದ್ ಕೇವಲ 10 ಎಸೆತಗಳಲ್ಲಿ 37 ರನ್ ಗಳಿಸಿ ತಂಡದ ಮೊತ್ತ ದಾಖಲೆ ಬರೆಯುವಂತೆ ಮಾಡಿದರು.
ಇಲ್ಲಿಯವರೆಗಿನ ಐಪಿಎಲ್ ಅತೀ ಹೆಚ್ಚು ಸ್ಕೋರ್ ಗಳನ್ನು ನೋಡುವುದಾದರೆ, ಸನ್ ರೈಸರ್ಸ್ ಹೈದರಾಬಾದ್ – 287 ರನ್
ಸನ್ ರೈಸರ್ಸ್ ಹೈದರಾಬಾದ್ – 277 ರನ್, ಕೋಲ್ಕತ್ತಾ ನೈಟ್ ರೈಡರ್ಸ್ – 272 ರನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು – 263 ರನ್, ಲಕ್ನೋ ಸೂಪರ್ ಜೈಂಟ್ಸ್ – 257 ರನ್ ಗಳಿಸಿವೆ.