ಚಿಕ್ಕಮಗಳೂರು: ಸಿದ್ದರಾಮಯ್ಯನಿಂದಾಗಿ ಹೆಗಡೆ ಜೊತೆ ಜಗಳ ಮಾಡಿದ್ದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಒಡನಾಡಿಗಳನ್ನು ಸಿದ್ದರಾಮಯ್ಯ ಮಂತ್ರಿ ಮಾಡಲಿಲ್ಲ. ಸಿದ್ದರಾಮಯ್ಯ ಮೋಸ ಮಾಡುತ್ತಾರೆ. ಮಂತ್ರಿ ಮಾಡಬೇಡ ಎಂದು ಹೆಗಡೆ ಹೇಳಿದ್ದರು. ಈ ವಿಚಾರಕ್ಕೆ ಹೆಗಡೆ ಮತ್ತು ನನಗೂ ಹೋರಾಟ ಆಯಿತು. ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿರನ್ನು ಮಂತ್ರಿ ಮಾಡುವಂತೆ ಮನೆಯ ಒಳಗೆ ಕೂರಿಸಿಕೊಂಡು ನನಗೆ ಹೇಳಿದ್ದರು. ಹಿಂದುಳಿದ ವರ್ಗದವರನ್ನೇ ಮಾಡುವುದಾದರೆ ತಿಪ್ಪೇಸ್ವಾಮಿ ಮಾಡು, ಸಿದ್ದರಾಮಯ್ಯನ ಮಾಡಬೇಡ ಎಂದಿದ್ದರು. ನಾನು ಸುಳ್ಳನ್ನು ಹೇಳಿ ಪಾಪದ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
ಮೋದಿ ಮತ್ತೆ ಈ ದೇಶದ ಪ್ರಧಾನಿಯಾಗುತ್ತಾರೆ. ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ. ಹಿಂದೆ ಕುಮಾರಸ್ವಾಮಿ ಸಾಲ ಮನ್ನಾ ಮಾಡಿದ್ದರು. 26 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಎಂದು ಹೇಳಿದ್ದಾರೆ.