ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ(52) ಆತ್ಮಹತ್ಯೆ ಪ್ರಕರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ ಎಂದು ಸಚಿವ ಬಿ. ನಾಗೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದ ಲೆಕ್ಕಾಧಿಕಾರಿ ಸಾವನ್ನಪ್ಪಿದ್ದಾನೆ. ಅವರ ಕುಟುಂಬಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹಣ ದುರುಪಯೋಗ ಆಗಿದೆ ಎಂಬುವುದು ಮಾಧ್ಯಮಗಳಲ್ಲಿ ಬಂದಿದೆ. ಈ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ನಿಗಮದ ಎಂಡಿ ಕೂಡ ದೂರು ನೀಡಿದ್ದಾರೆ. ಸುಮಾರು 87 ಕೋಟಿ ವರ್ಗಾವಣೆ ಮಾಡಲಾಗಿತ್ತು. ಈಗಾಗಲೇ 23 ಕೋಟಿ ಹಣ ವಾಪಸ್ ಪಡೆದುಕೊಳ್ಳಲಾಗಿದೆ. ಉಳಿದ 50 ಕೋಟಿ ಕೂಡ ಇಂದು ಸಂಜೆಯ ಒಳಗೆ ಬರಲಿದೆ. ಇದರಲ್ಲಿ ವಾಪಸ್ ಪಡೆದುಕೊಳ್ಳುತ್ತೇವೆ. ಬ್ಯಾಂಕ್ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾದಂತೆ ಕಾಣುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಅಧಿಕಾರಿಗಳ ವಿರುದ್ದ ಆರೋಪ ಮಾಡಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ. ಈ ಕುರಿತು ತನಿಖೆಯ ನಂತರ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.