ಶಿವಮೊಗ್ಗ: ಅಪ್ಪ-ಮಕ್ಕಳ ಕುತಂತ್ರದಿಂದಾಗಿ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.
ಆದರೆ, ಇದು ತಾತ್ಕಾಲಿಕವಾದ್ದ್ದು, ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಎಳಸು ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅಪ್ಪ ಯಡಿಯೂರಪ್ಪನ ಮಾತು ಕೇಳಿ ಉಚ್ಛಾಟನೆ ಮಾಡಿದ್ದಾರೆ. ಇದು ನನಗೆ ನೋವುಂಟು ಮಾಡಿದೆ. ಕಾರ್ಯಕರ್ತರಿಗೂ ಇದು ಬೇಸರ ತರಿಸಿದೆ. ಬಿಜೆಪಿಗೆ ವಿಜಯೇಂದ್ರನ ಕೊಡುಗೆ ಶೂನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಡೂಪ್ಲಿಕೇಟ್ ಬಿಜೆಪಿ ಕಾರ್ಯಕರ್ತ. ಕೆಜೆಪಿಗೆ ಹೋಗಿ ಬಂದಿದ್ದಾರೆ. ರಾಘವೇಂದ್ರ ಸೋತ ನಂತರ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದೊಂದು ಸಮಸ್ಯೆ ನಿವಾರಣೆ ಆದಂತಾಗಲಿದೆ. ಗೆದ್ದ ನಂತರ ನನ್ನನ್ನು ಯಡಿಯೂರಪ್ಪ ಮತ್ತೆ ಬಿಜೆಪಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಹೋಗಿದ್ದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮನೆಗೆ ಹೋಗಿ ಬೆಳಗಾವಿ ಟಿಕೆಟ್ ನೀಡಿದ್ದಾರೆ. ನಾನು ಅಪ್ಪ-ಮಕ್ಕಳ ಷಡ್ಯಂತ್ರದಿಂದ ಹೊರಗೆ ಬಂದಿದ್ದೇನೆ. ನನಗೂ ಈಗ ನಿರಾಳವಾಗಿದೆ ಎಂದು ಹೇಳಿದರು.
ನನಗೆ ಶಿವಮೊಗ್ಗದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತದೆ. ನೀವು ಕಟ್ಟಿದ ಪಕ್ಷದಿಂದಲೇ ನಿಮಗೆ ಉಚ್ಚಾಟನೆ ಆಗಿರುವುದು ನೋವಾಗಿದೆ ಎಂದು ಹೇಳುತ್ತಿದ್ದರು. ರಾಜ್ಯದ ಎಲ್ಲ ಕಾರ್ಯಕರ್ತರು ನೋವಿನಲ್ಲಿ ಇದ್ದಾರೆ. ಚುನಾವಣೆ ಮುಗಿದ ಬಳಿಕ ಒಳಗೆ ಹೋಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.