ಐಸಿಸಿ ಟಿ-20 ವಿಶ್ವಕಪ್ ಆತಿಥ್ಯ- ಬಿಸಿಸಿಐಗೆ ಡೆಡ್ ಲೈನ್ ವಿಧಿಸಿದ ಐಸಿಸಿ
ಪ್ರತಿಷ್ಠಿತ 2021ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆದ್ರೆ ಕೋವಿಡ್ ಮಹಾಮಾರಿಯಿಂದಾಗಿ ಭಾರತದಲ್ಲಿ ಆತಿಥ್ಯ ವಹಿಸಲು ಸಾಧ್ಯವಾಗುತ್ತೋ ಇಲ್ವೋ ಎಂಬುದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಆದ್ರೆ ಐಸಿಸಿ ಮಾತ್ರ ಬಿಸಿಸಿಐಗೆ ಡೆಡ್ ಲೈನ್ ವಿಧಿಸಿದೆ. ಭಾರತದಲ್ಲಿ ಆತಿಥ್ಯ ವಹಿಸಲು ಆಗುತ್ತೋ ಇಲ್ವೋ ಎಂಬುದನ್ನು ಜೂನ್ 28ರೊಳಗಡೆ ತಿಳಿಸಬೇಕು ಎಂದು ಹೇಳಿದೆ. ನಿನ್ನೆ ನಡೆದ ಐಸಿಸಿ ಸಭೆಯಲ್ಲಿ ಭಾರತಕ್ಕೆ ಡೆಡ್ ಲೈನ್ ನೀಡಲಾಗಿದೆ. ಈ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರು ಭಾಗವಹಿಸಿದ್ದರು.
ಭಾರತದಲ್ಲಿ ಸದ್ಯ ಕೋವಿಡ್ ಸಂಖ್ಯೆ ಕಮ್ಮಿಯಾಗುತ್ತಿದೆ. ಆದ್ರೆ ಟೂರ್ನಿಯನ್ನು ಸಂಘಟಿಸುವುದು ಅಸಾಧ್ಯವಾಗಿದೆ. ಹೀಗಾಗಿ ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯನ್ನು ಸೆಪ್ಟಂಬರ್ – ಅಕ್ಟೋಬರ್ ನಲ್ಲಿ ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಅಕ್ಟೋಬರ್ 10ರಂದು ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.
ಇನ್ನು ಐಪಿಎಲ್ ಮುಗಿಯುತ್ತಿದ್ದಂತೆ ಬಿಸಿಸಿಐ ಟಿ-20 ವಿಶ್ವಕಪ್ ಟೂರ್ನಿಯ ಆತಿಥ್ಯಕ್ಕೆ ಸಿದ್ಧವಾಗಬೇಕಿದೆ. ಈ ನಡುವೆ ಅಕ್ಟೋಬರ್ ನಲ್ಲಿ ಕೋವಿಡ್ ಮೂರನೇ ಅಲೆ ಬೀಸುವ ಎಚ್ಚರಿಕೆಯನ್ನು ಈಗಾಗಲೇ ತಜ್ಞರು ತಿಳಿಸಿದ್ದಾರೆ. ಇದ್ರಿಂದ ಭಾರತದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ನಡೆಯುವುದು ಬಹುತೇಕ ಅನುಮಾನವಾಗಿದೆ.
ಹೀಗಾಗಿ ಬಿಸಿಸಿಐ ಮತ್ತೆ ಯುಎಇ ಕ್ರಿಕೆಟ್ ಮಂಡಳಿಯ ಮೊರೆ ಹೋಗಬೇಕಾಗುತ್ತದೆ. ಭಾರತದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಆಯೋಜನೆ ಮಾಡದೇ ಇದ್ರೆ, ಬಿಸಿಸಿಐ ಯುಎಇ ನಲ್ಲಿ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡಬೇಕಾಗುತ್ತದೆ. ಈ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಕೂಡ ಚರ್ಚೆ ಮಾಡಲಾಗಿದೆ.
ಒಟ್ಟಿನಲ್ಲಿ ಅಂತಿಮ ನಿರ್ಧಾರ ಆತಿಥ್ಯ ವಹಿಸುವ ರಾಷ್ಟ್ರವಾದ ಭಾರತದ್ದಾಗಿದೆ. ಒಟ್ಟಿನಲ್ಲಿ ಬಿಸಿಸಿಐಗೆ ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಸವಾಲಿನ ಪ್ರಶ್ನೆಯಾಗಿದೆ.