ICC ODI Rankings : 6ನೇ ಸ್ಥಾನಕ್ಕೆ ಬಡ್ತಿ ಪಡೆದ ಶುಭ್ಮನ್ ಗಿಲ್..!!
ಪ್ರವಾಸಿ ಶ್ರೀಲಂಕಾ ಹಾಗೂ ನ್ಯೂಜಿ಼ಲೆಂಡ್ ವಿರುದ್ಧದ ODI ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡು ಸರಣಿಗಳಲ್ಲೂ ಕ್ಲೀನ್ ಸ್ಪೀಪ್ ಮಾಡಿದ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರು ICC ODI ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ.
ಪ್ರಮುಖವಾಗಿ ಭರ್ಜರಿ ಫಾರ್ಮ್ನಿಂದ ಮಿಂಚಿದ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್, ಐಸಿಸಿ ಏಕದಿನ ಬ್ಯಾಟ್ಸ್ಮನ್ಗಳ ಲಿಸ್ಟ್ನಲ್ಲಿ ಟಾಪ್-10 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಸರಣಿಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಗಿಲ್, 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರೆ. ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ.
ವರ್ಷದ ಆರಂಭದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಶುಭ್ಮನ್ ಗಿಲ್, ನ್ಯೂಜಿ಼ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲೂ ಇದೇ ಪ್ರದರ್ಶನ ನೀಡಿದ್ದರು. ಮೊದಲ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಹಾಗೂ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ್ದ ಯುವ ಆಟಗಾರ, ಒಟ್ಟಾರೆ ಸರಣಿಯಲ್ಲಿ 360 ರನ್ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಸದ್ಯ ICC ODI ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಮೂರು ಬ್ಯಾಟ್ಸ್ಮನ್ಗಳು ಕಾಣಿಸಿಕೊಂಡಿದ್ದಾರೆ. ಶುಭ್ಮನ್ ಗಿಲ್ 6ನೇ ಸ್ಥಾನ, ವಿರಾಟ್ ಕೊಹ್ಲಿ 7ನೇ ಸ್ಥಾನ ಹಾಗೂ ಭಾರತದ ನಾಯಕ ರೋಹಿತ್ ಶರ್ಮ 9ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಪಾಕಿಸ್ತಾನದ ನಾಯಕ ಬಾಬರ್ ಆಜ಼ಂ ನಂ.1 ಸ್ಥಾನದಲ್ಲಿದ್ದಾರೆ.