ಇತ್ತೀಚೆಗೆ ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ಗಲಭೆ ನಡೆದಿದ್ದು, ಅದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಗಲಭೆಗೆ ಕಾರಣರಾದವರನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿದ್ದು, ಈ ವಿಷಯದಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಮದ್ದೂರಿಗೆ ಭೇಟಿ ನೀಡುವುದಾಗಿ ಯತ್ನಾಳ್ ಘೋಷಣೆ
ಮದ್ದೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, ಮಾಜಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಹಿಂದೂ ಕಾರ್ಯಕರ್ತರು ಯತ್ನಾಳ್ ಅವರಿಗೆ ಮದ್ದೂರಿಗೆ ಬರುವಂತೆ ಆಗ್ರಹಿಸಿದ್ದರು. ಈ ಕುರಿತು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, “ಹಿಂದೂ ಸಮಾಜ ಕರೆದರೆ ಬರದೇ ಇರಲು ಸಾಧ್ಯವೇ?” ಎಂದು ಪ್ರಶ್ನಿಸಿ, ತಾವು ಮದ್ದೂರಿಗೆ ಭೇಟಿ ನೀಡುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.
ಈ ಘಟನೆಯ ಕುರಿತು ಪ್ರತಾಪ್ ಸಿಂಹ ಅವರು ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಯತ್ನಾಳ್, ಹಿಂದೂ ಯುವಕರನ್ನು ಬಂಧಿಸಿದ್ದರೆ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಕ್ಕೆ ಯತ್ನಾಳ್ ಸವಾಲ್
ಯತ್ನಾಳ್ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. “ಮಂಡ್ಯದ ಮದ್ದೂರಿಗೆ ಸದ್ಯದಲ್ಲೇ ಭೇಟಿ ನೀಡುತ್ತೇನೆ. ಮದ್ದೂರು ಹಿಂದೂಗಳು ಯಾವುದಕ್ಕೂ ಹೆದರಬೇಡಿ, ಎದೆಗುಂದಬೇಡಿ, ನಿಮ್ಮೊಂದಿಗೆ ಸಂಪೂರ್ಣ ಹಿಂದೂ ಸಮಾಜ ನಿಂತಿದೆ. ನಾನು ಮದ್ದೂರಿಗೆ ಬರುವ ಮುನ್ನವೇ ಕಲ್ಲು ಹೊಡೆದ ಮುಸಲ್ಮಾನ ಗೂಂಡಾಗಳ ಹೆಡೆಮುರಿ ಕಟ್ಟಿ, ಜೈಲಿಗೆ ತಳ್ಳಬೇಕು. ಇಲ್ಲದಿದ್ದರೇ ಪ್ರತಿಭಟನೆ ಇನ್ನು ತೀವ್ರ ಸ್ವರೂಪ ಪಡೆಯುತ್ತದೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಹೇಳಿಕೆಗಳು ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಮುಂದಿನ ನಡೆಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.








