ದಾವಣಗೆರೆ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಿಂದ ನಮ್ಮ ರಾಜ್ಯಕ್ಕೆ ತಾರತಮ್ಯವಾಗಿದೆ. ನಾನು ಹೇಳಿದ್ದು ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಹೇಳಿದಂತೆ ಯಡಿಯೂರಪ್ಪ ತಲೆ ಆಡಿಸಿದಂತೆ ನಾನೂ ಆಡಿಸಬೇಕೆ? ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದು ಸತ್ಯ. ನಾನು ಹೇಳಿದ್ದು ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ನಮಗೆ ಅನ್ಯಾಯವಾದರೆ ಪ್ರತಿಭಟಿಸಬಾರದಾ? 100 ರೂಪಾಯಿ ತೆರಿಗೆ ಕೊಟ್ರೆ ನಮಗೆ ಬರುವುದು 12 ರೂ. ಮಾತ್ರ. ನಾವು ಸರಿಯಾಗಿ ಬರ ನಿರ್ವಹಣೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಗುಳೆ ಹೋಗದ ರೀತಿ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತೆರಿಗೆ ಕೊಡುವುದರಲ್ಲಿ ನಾವು 2 ನೇ ಸ್ಥಾನದಲ್ಲಿದ್ದೇವೆ. ಅದರೂ ನಮಗೆ ಕೊಡಬೇಕಾದ ಅನುದಾನ ಸಿಗುತ್ತಿಲ್ಲ. ಆದರೆ, ಬಿಜೆಪಿ ನಾಯಕರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ರಾಜ್ಯದ ತೆರಿಗೆ ಹಣ ಒಂದು ಪೈಸೆ ಸಹ ಬಾಕಿ ಇಟ್ಟುಕೊಂಡಿಲ್ಲ. ಎಲ್ಲವನ್ನೂ ಬಿಡುಗಡೆ ಮಾಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಕ್ಕೆ, ಸಿಎಂ ಸಿದ್ದರಾಮಯ್ಯ ಈ ರೀತಿ ಹೇಳಿದ್ದಾರೆ.