ಕೊನೆ ಉಸಿರಿರುವವರೆಗೂ ರಾಜಕೀಯದಲ್ಲಿ ಇರುತ್ತೇನೆ : ಕಮಲ್ ಹಾಸನ್
ತಮಿಳುನಾಡು : ತಮ್ಮ ಕೊನೆಯ ಉಸಿರಿರುವವರೆಗೂ ರಾಜಕೀಯದಲ್ಲಿ ಇರುವುದಾಗಿ ಮಕ್ಕಳ್ ನೀಧಿ ಮೈಯಮ್ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಮಲ್ ಹಾಸನ್, “ಚುನಾವಣಾ ಸೋಲು ನನ್ನನ್ನು ತಡೆಯುವುದಿಲ್ಲ.
ನನ್ನ ಕೊನೆಯ ಉಸಿರಿರುವ ವರೆಗೂ ನಾನು ರಾಜಕೀಯದಲ್ಲಿ ಇರುತ್ತೇನೆ. ರಾಜಕೀಯ ಇರುವವರೆಗೂ ಮಕ್ಕಳ್ ನೀಧಿ ಮೈಯಮ್ ಪಕ್ಷ ಇರುತ್ತದೆ.
ಕೆಲವೇ ವ್ಯಕ್ತಿಗಳು ಪಕ್ಷವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಯಸಿದ್ದರು. ಆದರೆ ಇದು ಮರುಕಳಿಸುವುದಿಲ್ಲ. ಕಷ್ಟಪಟ್ಟು ದುಡಿಯುವ ಕಾರ್ಯಕರ್ತರ ಕೈಗಳು ಅಧಿಕಾರವನ್ನು ಪಡೆಯುತ್ತವೆ.
ಎಂಎನ್ ಎಂ ಪಕ್ಷದ ರೂಪಾಂತರದ ಆವೃತ್ತಿಯನ್ನು ನೀವು ನೋಡಲಿದ್ದೀರಿ. ಮೊದಲಿನಿಂದಲೂ ನಮ್ಮ ಸಿದ್ಧಾಂತದಲ್ಲಿ ಸ್ಪಷ್ಟತೆ ಮತ್ತು ನಮ್ಮ ಹಾದಿಯಲ್ಲಿ ಪ್ರಾಮಾಣಿಕತೆ ಇರುವುದರಿಂದ ನಮ್ಮ ಜರ್ನಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷ ಒಂದೇ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿಲ್ಲ. ಅವರು ಕೂಡ ದಕ್ಷಿಣ ಕೊಯಮತ್ತೂರು ಕ್ಷೇತ್ರದಿಂದ ಸ್ಫರ್ಧಿಸಿ, ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ ಸೋಲುಂಡಿದ್ದರು.










