ಕಳೆದ 5 ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ 3.20ರೂ ಏರಿಕೆ
ನವದೆಹಲಿ: ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಗನನಕ್ಕೆ ಏರುತ್ತಿದ್ದು, ಕಳೆದ ಐದು ದಿನಗಳಲ್ಲಿ 3.20 ರೂ ಏರಿಕೆಯಾಗಿದೆ.
ಸಧ್ಯ ಪೆಟ್ರೋಲ್ ಬೆಲೆ 100 ರೂ ದಾಟಿದ್ದು, ಡೀಸೆಲ್ ಬೆಲ 100 ರೂ ಮುಟ್ಟುವಂತಿದೆ. ಇದರಿಂದ ಜನರಿಗೆ ಭಾರಿ ಹೊಡೆತ ಬಿದ್ದಿದ್ದು, ಇದರಿಂದ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಕೂಡಾ ಏರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶನಿವಾರ ಲೀಟರ್ ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ.
ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದರಿಂದ ಪೆಟ್ರೋಲ್-ಡೀಸೆಲ್ ಬೆಲೆಯ ಏರಿಕೆಗೆ ಕಾರಣವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 97.81 ರೂ.ಗೆ ಹೋಲಿಸಿದರೆ ಈಗ 98.61 ರೂ. ಗೆ ಏರಿಕೆ ಕಂಡಿದೆ. ನಾಲ್ಕೂವರೆ ತಿಂಗಳ ಬಳಿಕ ಅಂದರೆ ಮಾರ್ಚ್ 22 ರಂದು ಇಂಧನ ಕಂಪನಿಗಳು ಮೊದಲ ಬಾರಿಗೆ 80 ಪೈಸೆ ಏರಿಸುವ ಮೂಲಕ ದರ ಪರಿಷ್ಕರಣೆ ಮಾಡಿದ್ದವು.
ನವೆಂಬರ್ ಆರಂಭದಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ವೊಂದಕ್ಕೆ 82 ಡಾಲರ್ ಇದ್ದದ್ದು ಈಗ 117 ಡಾಲರ್ಗೆ ಏರಿಕೆಯಾಗಿದೆ. ನಡುವೆ 140 ಡಾಲರ್ವರೆಗೂ ಕಚ್ಚಾ ತೈಲ ಬೆಲೆ ಏರಿಕೆಯಾಗಿತ್ತು ಎನ್ನುವುದು ಆಘಾತಕಾರಿ ಸಂಗತಿ. ಜೂನ್ 2017ರಿಂದ ದೈನಂದಿನ ಬೆಲೆ ಪರಿಷ್ಕರಣೆ ಪ್ರಾರಂಭವಾಗಿದೆ. ಒಟ್ಟಾರೆ ಐದು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 3.20 ರೂ. ಏರಿಕೆಯಾಗಿದೆ.