ಮಣಿಪುರದಲ್ಲಿ (Manipur) ಇಬ್ಬರು ಮಹಿಳೆಯರನ್ನು ಬೆತ್ತಲು ಮಾಡಿ ಮೆರವಣಿಗೆ ಮಾಡಿರುವ ದೃಶ್ಯದ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ವರದಿಗಳಂತೆ ಈ ಘಟನೆ ಕಾಂಗ್ಪೋಕ್ಪಿ (Kangpokpi) ಜಿಲ್ಲೆಯಲ್ಲಿ ಮೇ 4 ರಂದು ನಡೆದಿದೆ. ಇಬ್ಬರು ಮಹಿಳೆಯರನ್ನು ಸಮೀಪದ ಹೊಲಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ (Gang Rape) ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ನಡೆದ ಹಿಂದಿನ ದಿನವಷ್ಟೇ ಪರಿಶಿಷ್ಟ ಪಂಗಡದ ಮೀಸಲಿಗಾಗಿ ಮೈತೇಯ್ ಸಮುದಾಯದವರ ಬೇಡಿಕೆಯ ಕುರಿತು ಮೈತೇಯ್ ಹಾಗೂ ಕುಕಿ ಬುಡಕಟ್ಟು ಸಮುದಾಯದವರ ನಡುವೆ ಭಾರೀ ಘರ್ಷಣೆ ನಡೆದಿತ್ತು. ಈ ಮಹಿಳೆಯರು ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ್ದವರು ಎನ್ನಲಾಗಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಮೈತೇಯ್ ಸಮುದಾಯದ ಪುರುಷರ ಗುಂಪೊಂದು ಕುಕಿ ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ನಡೆಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಲ್ಲದೇ ಅವರಿಗೆ ಕಿರುಕುಳ ನೀಡಿದ್ದಾರೆ. ಮಹಿಳೆಯರು ಅಸಹಾಯಕತೆಯಿಂದ ಅಳುತ್ತ ತಮ್ಮನ್ನು ಬಿಡುವಂತೆ ಮನವಿ ಮಾಡಿರುವುದೂ ವೀಡಿಯೋದಲ್ಲಿ ಕಂಡು ಬಂದಿದೆ.
ಇಂತಹ ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. ಮಣಿಪುರ ಪೊಲೀಸರು ಇನ್ನೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಆದರೆ ಭಯಾನಕ ಘಟನೆ ಬೆಳಕಿಗೆ ಬರುತ್ತಲೇ ರಾಜಕೀಯ ನಾಯಕರು ಸೇರಿದಂತೆ ಅನೇಕರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ.