ಏಕದಿನ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಶುಭಾರಂಭ ಮಾಡಿರುವ ಟೀಂ ಇಂಡಿಯಾ ಇದೀಗ ತನ್ನ ಎರಡನೇ ಬೇಟೆಗೆ ಸಜ್ಜಾಗಿದೆ. ಇಂದು ದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಅಫ್ಘಾನಿಸ್ತಾನ ತಂಡವನ್ನ ಎದುರಿಸಲಿದೆ.
ವಿಶ್ವಕಪ್ ಕದನದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಭಾರತ, ನಿರೀಕ್ಷೆಯಂತೆ ಮೊದಲ ಪಂದ್ಯದಲ್ಲಿ ಜಯದ ನಗೆ ಬೀರಿದೆ. ಹೀಗಾಗಿ ತನ್ನ ಗೆಲುವಿನ ಓಟವನ್ನ ಮುಂದುವರಿಸುವ ಲೆಕ್ಕಾಚಾರದಲ್ಲಿರುವ ಟೀಂ ಇಂಡಿಯಾ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ತಂಡದ ಚಾಲೆಂಜ್ ಎದುರಿಸಲು ಸಜ್ಜಾಗಿದೆ. ಇಂದಿನ ಪಂದ್ಯಕ್ಕಾಗಿ ಎರಡು ತಂಡಗಳು ತಮ್ಮದೇ ರಣತಂತ್ರಗಳನ್ನ ರೂಪಿಸಿಕೊಂಡಿದ್ದು, ಜಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿವೆ.
2019ರಲ್ಲಿ ಕಡೆಯ ಫೈಟ್:
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಕೇವಲ 3 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದರೆ, ಇನ್ನೊಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳು ಕೊನೆಯ ಬಾರಿ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರೆ, ಕಿಂಗ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
ದೆಹಲಿಯಲ್ಲಿ ಭಾರತದ ಪ್ರಾಬಲ್ಯ:
ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಎರಡನೇ ಬಾರಿಗೆ ಭಾರತ ತಂಡವನ್ನ ಎದುರಿಸುತ್ತಿರುವ ಅಫ್ಘಾನಿಸ್ತಾನ ಇದೇ ಮೊದಲ ಬಾರಿಗೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುತ್ತಿದೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈವರೆಗೂ 21 ಪಂದ್ಯದಲ್ಲಿ ಕಣಕ್ಕಿಳಿದಿದ್ದು ಇದರಲ್ಲಿ 13 ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, 7 ಪಂದ್ಯದಲ್ಲಿ ಸೋಲಿನ ಆಘಾತ ಕಂಡಿದೆ. ಹೀಗಾಗಿ ದೆಹಲಿ ಅಂಗಳದಲ್ಲಿ ಪ್ರಾಬಲ್ಯ ಹೊಂದಿರುವ ಭಾರತ ವಿಶ್ವಕಪ್ನ ಮಹತ್ವದ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸುವ ಲೆಕ್ಕಾಚಾರ ಹೊಂದಿದೆ.
ಪ್ಲೇಯಿಂಗ್-11 ಕುತೂಹಲ:
ಇನ್ನೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲವೆನ್ ಬಗ್ಗೆ ಸಾಕಷ್ಟು ಕುತೂಹಲ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಅವರುಗಳು ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಹೀಗಾಗಿ ಅಫ್ಘಾನ್ ವಿರುದ್ಧದ ಪಂದ್ಯಕ್ಕೆ ಇವರಿಬ್ಬರು ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಕುತೂಹಲ ಮೂಡಿಸಿದ್ದು, ಸೂರ್ಯಕುಮಾರ್ ಯಾದವ್ ಅಫ್ಘಾನಿಸ್ತಾನದ ವಿರುದ್ಧ ಆಡಲು ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇವರ ಜೊತೆಗೆ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಹಿಂದೆ 2019ರ ವಿಶ್ವಕಪ್ನಲ್ಲಿ ಅಫ್ಘಾನ್ ವಿರುದ್ದ ಶಮಿ, ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು.
IND v AFG, Team India, Afghanistan, CWC 2023, Sports Karnataka