ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿ ಫೈನಲ್ ಹಂತ ತಲುಪಿದ್ದು, ನ.19ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಹೈವೋಲ್ಟೇಜ್ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲು ಸಜ್ಜಾಗಿವೆ.ಉಭಯ ತಂಡಗಳ ನಡುವಿನ ಈ ಫೈನಲ್ ಹಣಾಹಣಿ ಈ ಹಿಂದೆ ನಡೆದ 2003ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಪುನರಾವರ್ತನೆ ಎಂದೇ ಬಿಂಬಿಸಲಾಗಿದೆ. ಎರಡು ದಶಕಗಳ ಹಿಂದೆ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಕಾಳಗದಲ್ಲಿ ಆಸ್ಟ್ರೇಲಿಯಾ 125 ರನ್‌ಗಳಿಂದ ಗೆದ್ದು ವಿಶ್ವಚಾಂಪಿಯನ್‌ಪಟ್ಟಕ್ಕೇರಿತ್ತು. ಇದೀಗ ಈ ಎರಡು ತಂಡಗಳು ಮತ್ತೊಮ್ಮೆ ವಿಶ್ವಕಪ್ ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಕಾದಾಟ ನಡೆಸಲು ಸಜ್ಜಾಗಿದ್ದು, ಇದಕ್ಕಾಗಿ ವೇದಿಕೆ ಕೂಡ ನಿರ್ಮಾಣವಾಗಿದೆ.
ಭಾರತದ ಫೈನಲ್ ಹಾದಿ:
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ ಜಯದ ಅಲೆಯಲ್ಲಿ ತೇಲುತ್ತಿದೆ. ಗ್ರೂಪ್ ಹಂತದಲ್ಲಿ ಭಾರತ ಆಡಿದ ಎಲ್ಲ ಒಂಭತ್ತು ಪಂದ್ಯಗಳನ್ನು ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಬಳಿಕ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಭಾರತ ಶ್ರೇಷ್ಠ ಪ್ರದರ್ಶನವನ್ನ ನೀಡುವ ಮೂಲಕ ಜಯಭೇರಿ ಬಾರಿಸಿತ್ತು.ತಂಡದ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅವರುಗಳು ಅಬ್ಬರದ ಬ್ಯಾಟಿಂಗ್‌ನಿಂದ ಕಿವೀಸ್ ತಂಡಕ್ಕೆ 397 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಬಳಿಕ ಡ್ಯಾರಿಲ್ ಮಿಚೆಲ್ ಅವರ ಶತಕದ ನಡುವೆಯೂ ಕಿವೀಸ್ ತಂಡವನ್ನ 70 ರನ್‌ಗಳ ಅಂತರದಿಂದ ಮಣಿಸಿದ ಭಾರತ ಫೈನಲ್ ಪ್ರವೇಶಿಸುವಲ್ಲಿ ಯಶಸ್ಸು ಕಂಡಿತು. ಭಾರತದ ಪರ ಮೊಹಮ್ಮದ್ ಶಮಿ 57 ರನ್‌ಗಳಿಗೆ 7 ವಿಕೆಟ್ ಪಡೆದು ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟರು.
ಆಸೀಸ್ ಫೈನಲ್ ಹಾದಿ:
ಏಕದಿನ ವಿಶ್ವಕಪ್‌ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದು ಪ್ರಾಬಲ್ಯ ಮೆರೆದಿರುವ ಆಸ್ಟ್ರೇಲಿಯಾ ಪ್ರಸಕ್ತ ವಿಶ್ವಕಪ್‌ನಲ್ಲಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ವಿರುದ್ಧ ಸೋಲಿನ ಆಘಾತ ಅನುಭವಿಸಿದ್ದ ಆಸೀಸ್, ನಂತರದ ಪಂದ್ಯಗಳಲ್ಲಿ ಬಲಿಷ್ಠ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ಸು ಕಂಡಿತ್ತು. ಹೀಗಾಗಿ ಗ್ರೂಪ್ ಹಂತದ ಏಳು ಪಂದ್ಯಗಳಲ್ಲಿ ಗೆದ್ದು, 14 ಪಾಯಿಂಟ್ಸ್ ಪಡೆಯುವ ಮೂಲಕ 3ನೇ ತಂಡವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟಿತ್ತು. ಬಳಿಕ ಕೊಲ್ಕತ್ತಾ ಅಂಗಳದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಬಲಿಷ್ಠ ಸೌತ್ ಆಫ್ರಿಕಾ ವಿರುದ್ಧ ಸಂಘಟಿತ ಪ್ರದರ್ಶನ ನೀಡುವಲ್ಲಿ ಆಸ್ಟ್ರೇಲಿಯಾ ಯಶಸ್ಸು ಕಂಡಿತು. ಹೀಗಾಗಿ ಸೌತ್ ಆಫ್ರಿಕಾ ತಂಡವನ್ನ 212 ರನ್‌ಗಳಿಗೆ ಕಟ್ಟಿಹಾಕಿದ ಆಸೀಸ್, 3 ವಿಕೆಟ್‌ಗಳ ಅಂತರದಿಂದ ಗೆದ್ದು 8ನೇ ಬಾರಿಗೆ ಏಕದಿನ ವಿಶ್ವಕಪ್‌ನ ಫೈನಲ್ ಪ್ರವೇಶಿಸಿದೆ.
ಎರಡು ದಶಕಗಳ ಮುಖಾಮುಖಿ:
ಈ ಎರಡು ತಂಡಗಳು 20 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. 2003ರ ವಿಶ್ವಕಪ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಕಾದಾಟ ನಡೆಸಿದ್ದವು. ಸೌರವ್ ಗಂಗೂಲಿ ನೇತೃತ್ವದಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ, ರಿಕಿ ಪಾಂಟಿಂಗ್ ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿಗೆ ಶರಣಾಗಿ ಸೋಲಿನ ಆಘಾತ ಕಂಡಿತ್ತು. ಇದೀಗ ಮತ್ತೆ ವಿಶ್ವಕಪ್‌ನ ಫೈನಲ್‌ನಲ್ಲಿ ಆಸೀಸ್ ಸವಾಲು ಎದುರಿಸುತ್ತಿರುವ ಭಾರತ, ಅಂದಿನ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ.
12 ವರ್ಷದ ಬಳಿಕ ಪ್ರಶಸ್ತಿ ಕನಸು:
ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ಶ್ರೇಷ್ಠ ಪ್ರದರ್ಶನ ನೀಡಿದ್ದು, ಫೈನಲ್‌ನಲ್ಲಿ ಆಸೀಸ್ ಸವಾಲನ್ನ ಮಟ್ಟಿನಿಲ್ಲುವ ನಿರೀಕ್ಷೆಗಳು ಹೆಚ್ಚಾಗಿದೆ. ಈ ಹಿಂದೆ 2011ರಲ್ಲಿ ತವರಿನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಭಾರತ ಇದೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ತವರಿನಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶ ಹೊಂದಿದ್ದು, ಇದಕ್ಕಾಗಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಸಹ ಟೀಂ ಇಂಡಿಯಾದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
IND v AUS, Team India, Australia, World Cup, Final Match