ವಿಶ್ವದ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕುತೂಹಲ ಹೆಚ್ಚಿಸಿರುವ ಐಸಿಸಿ ಏಕದಿನ ವಿಶ್ವಕಪ್-2023 ಫೈನಲ್ ಪಂದ್ಯ ಇಂದು ನಡೆಯಲಿದ್ದು, ಅಹ್ಮದಾಬಾನದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ರೋಚಕ ಫೈನಲ್ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡು ಸಜ್ಜಾಗಿವೆ.
ಆಸೀಸ್ ವಿರುದ್ಧದ ಹೈವೋಲ್ಟೇಜ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾ ಗೆಲುವಿಗಾಗಿ ಶುಭ ಹಾರೈಸಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕ್ರಿಕೆಟ್ ಕಾವು ಹೆಚ್ಚಾಗಿದ್ದು, ರೋಹಿತ್ ಶರ್ಮಾ ಪಡೆಯ ಗೆಲುವಿಗಾಗಿ ಪ್ರಾರ್ಥಿಸಿ ಮೈಸೂರಿನ ಕ್ರಿಕೆಟ್ ಅಭಿಮಾನಿಗಳು ನಗರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಕೋಟಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಕ್ರಿಕೆಟ್ ಪ್ರೇಮಿಗಳು ಧಾನ್ಯಗಳ ಮೂಲಕ “ಆಲ್ ದಿ ಬೆಸ್ಟ್ ಇಂಡಿಯಾ, ವರ್ಲ್ಡ್‌ಕಪ್-2023” ಎಂದು ಬರೆಯುವ ಮೂಲಕ ಭಾರತದ ತಂಡದ ಆಟಗಾರರಿಗೆ ವಿಶೇಷ ರೀತಿಯಲ್ಲಿ ಶುಭ ಕೋರಿದರು.
ಪಂದ್ಯ ವೀಕ್ಷಣೆಗೆ ವಿಶೇಷ ಅವಕಾಶ:
ಭಾರತ-ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯ ವೀಕ್ಷಣೆಗೆ ಮೈಸೂರಿನಲ್ಲಿ ರಾಜ್ಯ ಸರ್ಕಾರ ವಿಶೇಷ ಅವಕಾಶ ಮಾಡಿಕೊಟ್ಟಿದೆ. ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬೃಹತ್ ಪರದೆಯ ಮೂಲಕ ಉಚಿತ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಫೈನಲ್ ಪಂದ್ಯ ವೀಕ್ಷಣೆಗೆ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
IND v AUS, Team India, Australia, World Cup, Final Match